Thursday, 12th December 2024

ಅಕ್ರಮ ಮದ್ಯ ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಚಿಕ್ಕಬಳ್ಳಾಪುರ: ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಮಾನ್ಯ ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್ ಸೂಚಿಸಿದರು.

ಶನಿವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಗೆಜ್ಜಿಗಾನಹಳ್ಳಿ ಗ್ರಾಮದಲ್ಲಿ “ಜಿಲ್ಲಾಧಿಕಾರಿ ಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ ಸೇವಿಸುವುದರಿಂದ ತಮ್ಮ ಆರೋಗ್ಯ ಹಾಗೂ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅಲ್ಲದೇ ಅಕ್ರಮ ಮದ್ಯಪಾನ ಮಾರಾಟ ಮಾಡುವುದು ಅಪರಾಧ ಈ ನಿಟ್ಟಿನಲ್ಲಿ ಮದ್ಯಪಾನ ಸೇವನೆಗೆ ದಾಸರಾಗದೇ ಉತ್ತಮ ಆರೋಗ್ಯಕ್ಕೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮಗಳು ಅಭಿವೃದ್ಧಿಯಾಗಲು ಸ್ವಚ್ಛತೆ ಅತ್ಯಗತ್ಯವಾಗಿದ್ದು, ಮನೆಯಲ್ಲಿ ಉತ್ಪಾದನೆ ಯಾಗುವ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಬೇಕು. ಮುಖ್ಯವಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ನಿವೇಶನ ರಹಿತರಿಗೆ ೨ ಎಕರೆ, ಸ್ಮಶಾನಕ್ಕೆ ೩೭ ಕುಂಟೆ ಜಮೀನು ಮಂಜೂರು

ಸರ್ಕಾರವು ಗ್ರಾಮದ ಎಲ್ಲ ಜನಾಂಗಕ್ಕೂ ಸೇರಿ ಗ್ರಾಮಕ್ಕೊಂದು ಸಾರ್ವಜನಿಕ ಸ್ಮಶಾನ  ನೀಡಲಾಗುತ್ತಿದ್ದು, ಗೆಜ್ಜಿಗಾನಹಳ್ಳಿ ಗ್ರಾಮಕ್ಕೆ ೩೭ ಕುಂಟೆ ಜಮೀನು ನೀಡಲಾಗಿದೆ. ಅಲ್ಲದೆ ಗ್ರಾಮದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ೨ ಎಕರೆ ಜಮೀನು ಈಗಾಗಲೇ ಮಂಜೂರು ಮಾಡಿದ್ದು ನಿವೇಶನ ರಹಿತ ಫಲಾನುಭವಿಗಳನ್ನು ಗುರ್ತಿಸಿ ನಿವೇಶನವನ್ನು ಹಂಚಿಕೆ ಮಾಡಲಾಗುವುದು ಎಂದರು.

ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಹಾಗೂ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಯಾವುದೇ ಮಗು ಮೂಲ ಶಿಕ್ಷಣದಿಂದ ಹೊರಗುಳಿಯಬಾರದು ಎಂದು ಸರ್ಕಾರವು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾ ಗುತ್ತಿದೆ. ಜೊತೆಗೆ ಆರೋಗ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸರ್ಕಾರವು ಸಾಕಷ್ಟು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಖುದ್ದು ಅಹ ವಾಲುಗಳನ್ನು ಸ್ವೀಕರಿಸಿ ರೈತರಿಗೆ ಭೂಮಿಯ ಹಕ್ಕು ಮತ್ತು ಮಾಹಿತಿಗೆ ಪಹಣಿ ಅತ್ಯಗತ್ಯವಾಗಿದೆ. ಗ್ರಾಮವಾಸ್ತವ್ಯ ಕಾರ್ಯ ಕ್ರಮದ ಮೂಲಕ ಕಂದಾಯ ಇಲಾಖೆಯ ಅಧಿಕಾರಿಗಳು ಖುದ್ದು ಮನೆ ಮನೆಗೆ ಭೇಟಿ ನೀಡಿ ರೈತರ ಪಹಣಿಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ರೈತರು ಅವುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಸದಾ ಅವಕಾಶವಾಗಿದ್ದು ಪ್ರತಿಯೊಬ್ಬರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಂದಾಯ ಇಲಾಖೆಯಿಂದ ದುರ್ಬಲರಿಗೆ, ವಯೋ ವೃದ್ಧರಿಗೆ, ಅಂಗವಿಕರಲರಿಗೆ, ವಸತಿ ರಹಿತರಿಗೆ ವಸತಿ, ನಿವೇಶನ, ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವಂತಹ ಸವಲತ್ತುಗಳನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಯಶಸ್ವಿ ಯಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಈ ಕುರಿತು ಎಲ್ಲಾ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಳಿಗೆಗಳನ್ನು ಸ್ಥಾಪಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ರಲ್ಲಿ ಕೋರಿದರು.

ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದ ಬೀದಿಗಳಲ್ಲಿ ರಸ್ತೆ, ಚರಂಡಿ, ಮೂಲಸೌಕರ್ಯಗಳ ಸ್ಥಿತಿ ಗತಿಗಳ ಪರಿಶೀಲನೆ ನಡೆಸಿದರು. ವಿವಿಧ ಯೋಜನೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಪಿಂಚಣಿ, ಪಹಣಿ, ಪೌತಿಖಾತೆ ಸೇರಿದಂತೆ ಹಕ್ಕು ಪತ್ರಗಳನ್ನು ವಿತರಿಸಿದರು.

ವಿವಿಧ ಇಲಾಖೆಗಳಿಂದ ತೆರಯಲ್ಪಟ್ಟ ಕೃಷಿ, ತೋಟಗಾರಿಕೆ, ರೇಷ್ಮೆ ವಸ್ತುಪ್ರದರ್ಶನ ಮಳಿಗೆಗಳು, ಆರೋಗ್ಯ ಶಿಬಿರ ಮಳಿಗೆ,  ಆರೋಗ್ಯ ತಪಾಸಣೆ ಹಾಗೂ ಔಷಧಿಗಳ ವಿತರಣೆ, ಡೆಂಗ್ಯೂ ರೋಗದ ಕುರಿತು ಅರಿವು ಶಿಬಿರ ಸೇರಿದಂತೆ ಇತರೆ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಗ್ರಾಮಸ್ಥರಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಕೆಎಂಎಫ್ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಜಿಲ್ಲಾ ಆಹಾರ ಮತ್ತು ಗ್ರಾಹಕರ  ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರಾಧ, ಮುಖಂಡರಾದ ಶೀಗೆಹಳ್ಳಿ ಬಸವರಾಜ್, ಸಿಡಿಪಿಓ ನೌತಾಜ್, ಬಿಸಿಎಂ ಅಧಿಕಾರಿ ನಾರಾಯಣಪ್ಪ, ಗ್ರಾಮಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ದೇವರಾಜ್, ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಜರಿದ್ದರು.