ಚಿಕ್ಕಬಳ್ಳಾಪುರ: ಕಾನೂನಿನ ಕಲಿಕೆ ಕೊನೆಯಿಲ್ಲದ್ದು, ಅಂತಹ ನಿರಂತರ ಕಲಿಕೆಯನ್ನು ತಮ್ಮದಾಗಿಸಿಕೊಂಡು ವಿದ್ಯೆಯನ್ನು ಸಿದ್ಧಿಸಿಕೊಂಡರೆ ಸಮಾಜದಲ್ಲಿ ಮತ್ತು ದೇಶದಲ್ಲಿ ಎಂತಹದ್ದೇ ಉನ್ನತ ಸ್ಥಾನ ಗಳಿಸಲು ನೆರವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಅವರು ಶನಿವಾರ ನಗರದ ನಿಡುಮಾಮಿಡಿ ಮಠದ ಸಿದ್ಧರಾಮಯ್ಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಹಾಗೂ ಸಿದ್ಧರಾಮಯ್ಯ ಕಾನೂನು ಮಹಾ ವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ್ಞಾನವೇ ಶಕ್ತಿ. ಅಂತಹ ಜ್ಞಾನದ ಸಾಗರವನ್ನೇ ತಿಳಿದಿದ್ದ ಭಾರತರತ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರೂ ಸಹ ಭಾರತ ಸರ್ಕಾರದ ಉನ್ನತ ಮಂತ್ರಿ ಪದವಿಯನ್ನು ಸರ್ಕಾರವೇ ಗುರುತಿಸಿ ಕೊಡಲು ಕಾರಣ ಅವರಲ್ಲಿದ್ದ ಅಪಾರವಾದ ಮೇಧಾವಿತನ ಮತ್ತು ಪ್ರಕಾಂಡ ಜ್ಞಾನ ಸಂಪತ್ತೇ ಕಾರಣವಾಗಿತ್ತು. ಆದ್ದರಿಂದ ಸಮಾಜದಲ್ಲಿ ಶ್ರೇಷ್ಠ ಗೌರವದ ವೃತ್ತಿಯಾದ ವಕೀಲ ವೃತ್ತಿಯನ್ನು ಹೊಂದಲು ತಾವೆಲ್ಲರೂ ಕಲಿಕೆಯ ಹಂತದಲ್ಲಿರುವಿರಿ. ಅಂತಹ ಮಹನೀಯರನ್ನು ಆದರ್ಶಪ್ರಾಯವಾಗಿಟ್ಟುಕೊಂಡು ಕಠಿಣ ಶ್ರಮ ವಹಿಸಿ ಕಾನೂನಿನ ಕಲಿಕೆಯನ್ನು ತೃಪ್ತಿದಾಯಕವಾಗಿ ಗಳಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು, ಅನ್ಯಾಯಕ್ಕೊಳಗಾದವರನ್ನು ಗುರ್ತಿಸಿ ನ್ಯಾಯ ಒದಗಿಸುವಂತಹ ಸಾಮಾಜಿಕ ಜವಾಬ್ದಾರಿಯನ್ನು ತಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ ವಕೀಲರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡುತ್ತಾ ಒಬ್ಬ ಉತ್ತಮ ವಕೀಲನಾಗಲು ಏನೆಲ್ಲ ತಿಳಿದುಕೊಳ್ಳಬೇಕು, ಹೇಗೆ ಸಿದ್ಧತೆ ನಡೆಸಬೇಕು ಹಾಗೂ ವಕೀಲ ವೃತ್ತಿಯ ಮಹತ್ವವೇನು ಎಂಬುದನ್ನು ವಿದ್ಯಾರ್ಥಿ ಗಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಉಪಾಧ್ಯಕ್ಷ ವಿನೋದ್ ಕುಮಾರ್ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯದ ಆಡಳಿತಾಧಿಕಾರಿ ಡಾ.ಶಿವಜ್ಯೋತಿ, ಪ್ರಾಂಶುಪಾಲ ಸಂಜಯ್ ಉಟಗಿ, ವಕೀಲರಾದ ಶಿವಪ್ಪ, ಮಂಜುನಾಥ್ ರೆಡ್ಡಿ, ಸೌಜನ್ಯ ಗಾಂಧಿ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಈ ವೇಳೆ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ವಕೀಲರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.