ತುಮಕೂರು: ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದ್ದು, ವಿದ್ಯುತ್ ಉತ್ಪಾದನೆಗೆ ಧಕ್ಕೆಯಾಗಿದೆ. ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ನಾವು ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಬೇಕಾಗಿದೆ ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಬೇಡಿಕೆಯೂ ಹೆಚ್ಚಾಗಿದೆ. ಮಳೆ ಕಡಿಮೆಯಾದ ಕಾರಣ ರಾಜ್ಯದ ಕೆಲವು ಭಾಗಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸ ಲಾಗುವುದು. ತುಮಕೂರಿನಲ್ಲಿ ಶೇ 35.ರಷ್ಟು ರೈತರು ಮಾತ್ರ ಬಿತ್ತನೆ ಆರಂಭಿಸಿದ್ದಾರೆ. ಮಳೆ ಕಡಿಮೆ ಯಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಲು ಕಾರಣವಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳನ್ನು ಮಾಹಿತಿ ಪಡೆದ ನಂತರ ಬರಪೀಡಿತ ಪ್ರದೇಶಗಳೆಂದು ಘೋಷಿಸುತ್ತೇವೆ ಎಂದರು.
31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 11 ರ ಹೊತ್ತಿಗೆ ಸಾಮಾನ್ಯ ಮಳೆಯಾಗಿದೆ . ರಾಜ್ಯದ ಬಹುತೇಕ ಜಲಾಶಯ ಗಳಲ್ಲಿ ಕಡಿಮೆ ನೀರಿದೆ. ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಲ್ಲಿ ಆಗಸ್ಟ್ 11 ರ ಹೊತ್ತಿಗೆ ಅವುಗಳ ಪೂರ್ಣ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟು ನೀರು ಇದೆ ಎಂದು ಅಂಕಿಅಂಶಗಳು ತಿಳಿಸಿವೆ ಎಂದರು.
ಬರಗಾಲದಿಂದ ಸಂತ್ರಸ್ತರಾದ ರೈತರಿಗೆ ರಾಜ್ಯ ಸರಕಾರ ಪರಿಹಾರ ನೀಡಬೇಕಾಗಿದ್ದು, ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಹೊರೆಯಾಗಲಿದೆ. ಸರಕಾರವು ತನ್ನ ಐದು ಚುನಾವಣಾ ಗ್ಯಾರಂಟಿಗಳನ್ನು ಪೂರೈಸಲು ಹಣವನ್ನು ಸಂಗ್ರಹಿಸಲು ಒತ್ತಡದಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ವಾರ್ಷಿಕ 52,000 ಕೋಟಿ ರುಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.