Saturday, 26th October 2024

ಫೆಬ್ರವರಿ ತಿಂಗಳಲ್ಲಿ ಜಿಲ್ಲಾ ಕಲಾಮಂದಿರ ಲೋಕಾರ್ಪಣೆಗೆ ಸುಧಾಕರ್ ಸೂಚನೆ

ತಪ್ಪಿದ್ದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ತಲೆದಂಡ ಖಚಿತ

ಚಿಕ್ಕಬಳ್ಳಾಪುರ : ೧೨.೫ ಕೋಟಿ ಯೋಜನಾ ವೆಚ್ಚದಲ್ಲಿ ೨೦೧೩-೧೪ ರಿಂದ ನಿರ್ಮಾಣವಾಗುತ್ತಿರುವ ಜಿಲ್ಲಾ ಕಲಾಮಂದಿರಕ್ಕೆ ಹಿಡಿದಿರುವ ಗ್ರಹಣ ಬಿಡಿಸಲು ಕಡೆಗೂ ಮುಂದಾಗಿರುವ ಸಚಿವ ಸುಧಾಕರ್ ಫೆಬ್ರವರಿ ತಿಂಗಳೊಳಗೆ ಲೋಕಾರ್ಪಣೆಗೆ ಸಜ್ಜು ಗೊಳಿಸಬೇಕು.

ಇಲ್ಲವಾದಲ್ಲಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ತಲೆದಂಡ ಖಚಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ತಲೆದಂಡಕ್ಕೆ ಸಿದ್ದರಾಗಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ನಗರದ ಬಸಪ್ಪನ ಛತ್ರದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ ಸಾಂಸ್ಕೃತಿಕ ಸೌಧವೆಂಬ ಹಿರಿಮೆಗೆ ಪಾತ್ರವಾಗಿ ಹೊರಹೊಮ್ಮ ಬೇಕಿದ್ದ ಜಿಲ್ಲಾ ಕಲಾಮಂದಿರ ಸ್ಥಳೀಯ ಜನಪ್ರತಿನಿಧಿ ಗಳು ಮತ್ತು ಅಧಿಕಾರಿ ಗಳ ದಿವ್ಯನಿರ್ಲಕ್ಷ್ಯಕ್ಕೆ ಒಳಗಾಗಿ ಒಂದು ದಶಕಕ್ಕೂ ಮೀರಿದ ಅವಧಿಯಿಂದ ಕಾಮಗಾರಿ ಕುಂಠಿತಗೊ0ಡು ಸೊರಗುತ್ತಿದೆ.

ಜತೆಗೆ ಅನೈತಿಕ ಚಟವಟಿಕೆಗಳ ತಾಣವಾಗಿ ಮಾರ್ಪಟ್ಟು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಈಬಗ್ಗೆ ವಿಶ್ವವಾಣಿ ಪತ್ರಿಕೆ ಹಲವಾರು ಬಾರಿ ವಿಶೇಷ ವರದಿ ಪ್ರಕಟಿಸಿದ್ದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಂಗಳವಾರ ಇಲ್ಲಿಗೆ ಭೇಟಿ ನೀಡಿದ್ದ ಸಚಿವರು ಜಿಲ್ಲಾ ರಂಗಮ೦ದಿರ ನನ್ನ ಕನಸಿನ ಯೋಜನೆಯಾಗಿದ್ದು ಬಿಬಿ ರಸ್ತೆಯ ಪ್ರಮುಖ ಜಾಗದಲ್ಲಿಯೇ ನಿರ್ಮಾಣ ಮಾಡಲು ಚಿಂತಿಸಿ ಬಹಳ ಕಷ್ಟ ಪಟ್ಟು ಇದಕ್ಕೆ ಬೇಕಾದ ನಿವೇಶನವನ್ನು ಒದಗಿಸಲಾಗಿದೆ.

ಜಿಲ್ಲೆಯ ಸಾಂಸ್ಕೃತಿಕ ಕಲರವಕ್ಕೆ ಪಾತ್ರವಾಗಬೇಕಿದ್ದ ಈ ಭವನವನ್ನು ಗುಣಮಟ್ಟದಲ್ಲಿ ರಾಜಿಯಾಗದೆ ಅತ್ಯಂತ ಆಧುನಿಕವಾಗಿ ನಿರ್ಮಾಣ ಮಾಡಲು ಬೇಕಾದ ಸಿದ್ದತೆ ಮಾಡ ಲಾಗಿತ್ತು. ನಿರ್ಮಾಣಕ್ಕೆ ಬೇಕಾದ ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇದ್ದರೂ ಕೂಡ ಗುತ್ತಿಗೆದಾರರ ದಿವ್ಯನಿರ್ಲಕ್ಷ್ಯದಿಂದ ಇಷ್ಟು ವರ್ಷಗಳ ಕಾಲ ಲೋಕಾರ್ಪಣೆ ಭಾಗ್ಯದಿಂದ ವಂಚಿತವಾಗಿದೆ. ಹೀಗಾಗಿ ನಾನೇ ಖುದ್ದಾಗಿ ಭೇಟಿ ನೀಡಿ ಸಂಬ೦ಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ಮಾಡಲಾಗಿದೆ.

೨೦೨೩ರ ಫೆಬ್ರವರಿ ಮಾಸಾಂತ್ಯಕ್ಕೆ ಲೋಕಾರ್ಪಣೆಗೆ ಸಜ್ಜುಗೊಳಿಸುವಂತೆ, ಉಳಿದಿರುವ ಕಾಮಗಾರಿ ಶೀಘ್ರಗತಿಯಲ್ಲಿ ಮುಗಿಸಲು ಖಡಕ್ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಸಂಬ0ಧಪಟ್ಟ ಅಧಿಕಾರಿಗಳ ತಲೆದಂಡ ಖಚಿತ ಎಂದು ಎಚ್ಚರಿಕೆ ನೀಡಿದರು.

ವಿಳಂಭಕ್ಕೆ ಅಧಿಕಾರಿಗಳೇ ಹೊಣೆ: ೨೦೧೩-೧೪ರಲ್ಲಿ ಕಾಮಗಾರಿ ಪ್ರಾರಂಭವಾಗಿರುವ ಜಿಲ್ಲಾ ಕಲಾಭವನವು ಒಂದು ದಶಕಕ್ಕೂ ಮೀರಿದ ಅವಧಿಯಿಂದ ನಿರ್ಮಾಣ ವಾಗುತ್ತಲೇ ಇರುವುದು ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಿನ್ನಡೆ ಯಾಗಿರುವುದು ಈ  ವಲಯದ ಬೇಸರಕ್ಕೆ ಕಾರಣ ವಾಗಿದೆ. ಇದಕ್ಕೆ ಗುತ್ತಿಗೆದಾರ ಏಜೆನ್ಸಿಯೇ ನೇರಹೊಣೆ.

ಹೀಗಾಗಿ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿಸಿ ಎಚ್ಚರಿಕೆ ನೀಡಲಾಗಿದೆ. ಫೆಬ್ರವರಿ ಮಾಸಾಂತ್ಯಕ್ಕೆ ಲೋಕಾರ್ಪಣೆ ಆಗುವಂತೆ ನೋಡಿಕೊಳ್ಳುವ ಉಸ್ತುವಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ನಿಗದಿತ ಕಾಲಮಿತಿಯಲ್ಲಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ಕಿರಣ್,ನಗರಸಭಾ ಅಧ್ಯಕ್ಷ ಆನಂದಬಾಬುರೆಡ್ಡಿ, ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್, ಉಪವಿಭಾಗಾಧಿಕಾರಿ ಡಾ. ಸಂತೋಷ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕಿ ಪಿ.ಎಸ್.ರಾಜೇಶ್ವರಿ, ಪೌರಾಯುಕ್ತ ಉಮಾಶಂಕರ್, ಗೃಹನಿರ್ಮಾಣ ಮಂಡಳಿ ಅಧಿಕಾರಿಗಳು ಇದ್ದರು.