Wednesday, 11th December 2024

ಟ್ರಾನ್ಸ್ಪೋರ್ಟ್ ಲಾರಿಗಳಿಗೆ ಸಂಚಾರಿ ನಿಯಮ ಮನವರಿಕೆ ಮಾಡುವಂತೆ ಸಾರ್ವಜನಿಕರ ಒತ್ತಾಯ

ಟ್ರಾನ್ಸ್ಪೋರ್ಟ್ ಲಾರಿಗಳ ಕಿರಿಕಿರಿಗೆ ಬೇಸತ್ತು ಠಾಣೆಗೆ ದೂರು ನೀಡಿದ ದೊಡ್ಡಪೇಟೆ ನಿವಾಸಿಗಳು

ತಿಪಟೂರು : ನಗರದ ದೊಡ್ಡಪೇಟೆಯಲ್ಲಿ ದಿನಸಿ ವಾಹನ ಸೇರಿದಂತೆ ಹಲವು ವಸ್ತು ಗಳನ್ನು ಹೊತ್ತು ಬೃಹದಾಕಾರದ ಲಾರಿಗಳು ಆಗಮಿಸುತ್ತಿದ್ದು ರಸ್ತೆಯಲ್ಲಿ ಗಂಟೆಗಟ್ಟಲೇ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಓಡಾಡಲು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಗರದ ವಾರ್ಡ್ ನಂ ೩ ರಲ್ಲಿನ ದೊಡ್ಡಪೇಟೆ ಸೇರಿದಂತೆ ನಗರದ ವಿವಿದೆಡೆಗಳಿಗೆ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ದಿನಸಿ ಸೇರಿದಂತೆ ಹಲವು ಸರಕನ್ನು ತುಂಬಿದ ಬೃಹದಾಕಾರದ ಲಾರಿಗಳು ಬರುತ್ತವೆ. ಸಂಚಾರಿ ನಿಯಮದ ಅನ್ವಯ ಟ್ರಾನ್ಸ್ಪೋರ್ಟ್ ಲಾರಿಗಳು ಬೆಳಿಗ್ಗೆ ೯ ಗಂಟೆಯೊಳಗೆ ಹಾಗೂ ರಾತ್ರಿ ೯ ಗಂಟೆಯ ನಂತರದಲ್ಲಿ ಸರಕನ್ನು ಇಳಿಸಲು ಸೂಚಿಸಲಾಗಿದೆ.

ಆದರೆ ಕಳೆದ ಹಲವಾರು ತಿಂಗಳುಗಳಿ0ದ ವಸತಿ ಪ್ರದೇಶ, ಶಾಲಾ ಪ್ರದೇಶದಲ್ಲಿ ಬೆಳಿಗ್ಗೆ ೧೦ ಗಂಟೆಯ ನಂತರದಲ್ಲಿ ರಸ್ತೆಯ ಮಧ್ಯೆದಲ್ಲಿ ಲಾರಿ ನಿಲ್ಲಿಸಿ ಸರಕುಗಳನ್ನು ಇಳಿಸುತ್ತಾರೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಪ್ರಶ್ನಿಸಿದರೆ ಸ್ಥಳೀಯ ರನ್ನು ಬೆದರಿಕೆ ಹಾಕುತ್ತಿದ್ದು ಈ ಸಂಬ0ಧ ನಗರ ಪೊಲೀಸ್ ಠಾಣೆಗೆ ದೂರುಸಹ ನೀಡಲಾಗಿದೆ. ಕೂಡಲೇ ಪೊಲೀಸ್ ಠಾಣೆಯವರು ಟ್ರಾನ್ಸ್ಪೋರ್ಟ್ ಲಾರಿಗಳಿಗೆ ನಿಯಮವನ್ನು ಪಾಲನೆ ಮಾಡುವಂತೆ ಸೂಚಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

*
ವಸತಿ ಪ್ರದೇಶದಲ್ಲಿ ಬೆಳಿಗ್ಗೆ ೧೧ ಗಂಟೆಯಲ್ಲಿ ರಸ್ತೆಗೆ ಅಡ್ಡಲಾಗಿ ಟ್ರಾನ್ಸ್ಪೋರ್ಟ್ ಲಾರಿಗಳನ್ನು ನಿಲ್ಲಿಸಿ ಸರಕುಗಳನ್ನು ಇಳಿಸುತ್ತಾರೆ. ಇದರಿಂದಾಗಿ ಸ್ಥಳೀಯರು ಓಡಾಡುವುದು ಕಷ್ಟವಾಗಿದೆ. ಪ್ರಶ್ನಿಸಲು ಹೋದರೆ ಸ್ಥಳೀಯರ ಮೇಲೆ ಲಾರಿ ಚಾಲಕರು ದಬ್ಬಾಳಿಕೆ ಮಾಡುತ್ತಾರೆ.

ಗೋಪಿಗಣೇಶ್, ದೊಡ್ಡಪೇಟೆ ನಿವಾಸಿ, ತಿಪಟೂರು