ಮೈಸೂರು: ಕ್ರಿಸ್‌ಮಸ್ ಹಾಗೂ ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಗಿ ಉತ್ಸವ ಅದ್ಧೂರಿಯಾಗಿ ನಡೆಯಲಿದೆ.
ಅರಮನೆಯ ಆವರಣದಲ್ಲಿ ಹತ್ತು ದಿನ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದ್ದು, 4 ಲಕ್ಷ ಹೂಗಳು ಪ್ರವಾಸಿಗರನ್ನು ಹೂಗಳ ಲೋಕಕ್ಕೆ ತೇಲಿಸಲಿದೆ.
ಡಿ.22ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡುವರು. ಅಂದು 500 ಮಂದಿಗೆ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರ ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೀಡಲಾಗುವುದು.
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಮೈಸೂರಿನ ಅರಮನೆ ಆವರಣದಲ್ಲಿ ಡಿ.22 ರಿಂದ 31ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸೋಮನಾಥ ಪುರ ಚೆನ್ನಕೇಶವ ದೇವಾಲಯ, ಹಂಪಿಯ ಕಲ್ಲಿನ ರಥ, ಸಂವಿಧಾನ ಪೀಠಿಕೆ, ಸಿರಿಧಾನ್ಯ ವರ್ಷವಾದ್ದರಿಂದ ಮಲೆ ಮಹದೇಶ್ವರ ಸ್ವಾಮಿಯು ಹುಲಿ ಯನ್ನೇರಿ ಬರುವ ಮಾದರಿಯನ್ನು ಸಿರಿಧಾನ್ಯ ಹಾಗೂ ಹೂ ಬಳಸಿ ನಿರ್ಮಿಸಲಾಗಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಡಿ.22 ರಿಂದ 25ರವರೆಗೆ ಪ್ರತಿದಿನ ಸಂಜೆ 5.45 ರಿಂದ ರಾತ್ರಿ 9.30ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಡಿ.23 ರಂದು ಸಂಜೆ 5.45 ರಿಂದ 6.30 ರವರೆಗೆ ಹನುಮಂತರಾಜು ಅವರಿಂದ ಲಯ – ನಾದ ತರಂಗ ಸಂಗೀತ ಮಿಲನ, 6.30 ರಿಂದ 7.30 ರವರೆಗೆ ಕಿಶನ್ ಬಿಳಿಗಲಿದ ಅಕಾಡೆಮಿ ಡ್ಯಾನ್ಸ್ ತಂಡದಿಂದ ನೃತ್ಯ, 7.45ರಿಂದ 9.45 ರವರೆಗೆ ಹಿನ್ನೆಲೆ ಗಾಯಕ ಏಕಂಬರಂ ಲಕ್ಷ್ಮಿ ನಾರಾಯಣ್ ಅವರಿಂದ ಸಂಗೀತ ರಸಸಂಜೆ. ಹಾಗೇ ಡಿ.24 ರಂದು 5.45 ರಿಂದ 6.30 ರವರೆಗೆ ರೆನ್ಸಿ ಎನ್.ಯೋಗೇಶ್ ತಂಡದಿಂದ ಕರಾಟೆ ಇಂಡಿಯಾ ಸಮರ ಕಲೆ ಪ್ರದರ್ಶನ, 6.30 ರಿಂದ 7.15 ರವರೆಗೆ ಹೇಮಲತಾ ಕುಮಾರಸ್ವಾಮಿ ತಂಡದಿಂದ ಸುಗಮ ಸಂಗೀತ, 7 ರಿಂದ 9.30 ರವರೆಗೆ ಗಾಯಕರಾದ ಹೇಮಂತ್, ಶಮಿತ ಮಲ್ನಾಡ್, ಪೃಥ್ವಿ ಭಟ್, ಅಶ್ವಿನ್ ಶರ್ಮ, ಅಂಕಿತ ಕುಂಡು ತಂಡದಿಂದ ಸಂಗೀತಯಾನ ಕಾರ್ಯಕ್ರಮ ಜರುಗಲಿದೆ.
ಡಿ.25 ರಂದು ಸಂಜೆ 6ರಿಂದ 7ರವರೆಗೆ ನಾಗಲಕ್ಷ್ಮಿ ತಂಡದಿಂದ ನೃತ್ಯ, 7ರಿಂದ 8ರವರೆಗೆ ವಿದ್ಯಾಭೂಷಣ್ ಮತ್ತು ರಘುಪತಿ ಭಟ್ ಅವರಿಂದ ಕುಂಚ ಗಾಯನ, 8ರಿಂದ 10 ಗಂಟೆವರೆಗೆ ಗಾಯಕಿ ಎಂ.ಡಿ.ಪಲ್ಲವಿ ತಂಡದಿಂದ ಸುಗಮ ಸಂಗೀತ ಗಾಯನ ಇರಲಿದೆ. ಡಿ.31 ರಂದು ರಾತ್ರಿ 11ರಿಂದ 12 ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಇರಲಿದೆ.