ಗುಬ್ಬಿ : ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣದ ಕನಸು ಕಂಡ ಕುಮಾರಣ್ಣ ಮಾತ್ರ ಜನಪರ ಯೋಜನೆ ಸಾಕಾರ ಗೊಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಜನರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚೇಳೂರು ಗ್ರಾಮದ ಪೇಟೆ ಬಾಯ್ಸ್ ಸಂಘದ ವತಿಯಿಂದ ಶ್ರೀ ವಿಜಯ ವಿನಾಯಕಸ್ವಾಮಿ ವಿಸರ್ಜನಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು 30 ಹಾಸಿಗೆ, ಮೂವರು ವೈದ್ಯರು ಇರುವ ಹೈಟೆಕ್ ಆಸ್ಪತ್ರೆ ಬಡವರ ಆರೋಗ್ಯ ಕಾಪಾಡಲಿದೆ.
ಇದೇ ಪ್ರಾದೇಶಿಕ ಪಕ್ಷ ಕಂಡ ಉತ್ತಮ ಕನಸು. ಇದರ ಸಾಕಾರಕ್ಕೆ ಜೆಡಿಎಸ್ ಗೆ ಮತ ನೀಡಿ ಅಧಿಕಾರ ನೀಡಿ ಎಂದು ಮನವಿ ಮಾಡಿದರು.ಗ್ರಾಮೀಣ ಜನರಿಗೆ ಅತ್ಯಗತ್ಯ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಬೇಕು ಎನ್ನುವ ಅಂಶವನ್ನು ಅಳವಡಿಸಿಕೊಂಡ ಕುಮಾರಣ್ಣ ಅವರ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಿದೆ.
ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿ ಗಲಭೆ ಮಾಡಿಸುವ ಪಕ್ಷಗಳ ಬಗ್ಗೆ ಜನರಿಗೆ ತಿಳಿದಿದೆ. ಪ್ರಾದೇಶಿಕ ಪಕ್ಷ ದೇವೇಗೌಡರು ಹಾಗೂ ಕುಮಾರಣ್ಣ ಮಾಡಿದ ಅಭಿವೃದ್ದಿ ಜನಪರ ಕೆಲಸಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಪಂಚರತ್ನ ಯಾತ್ರೆ ಬಹುತೇಕ ಯಶಸ್ಸು ಕಂಡಿದೆ. ಕೋಲಾರ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ಡಿಸೆಂಬರ್ ಮಾಹೆಯಲ್ಲಿ ತುಮಕೂರು ಜಿಲ್ಲೆಗೆ ಬರಲಿರುವ ಪಂಚರತ್ನ ಯೋಜನೆ ರಥವನ್ನು ಭವ್ಯವಾಗಿ ಸ್ವಾಗತಿಸಿ ಮನೆ ಮನೆಗೆ ಅದರ ಮಹತ್ವ ತಿಳಿಸಿ ಹಾಗೆಯೇ ರಾಷ್ಟ್ರೀಯ ಪಕ್ಷಗಳ ದುರಾಡಳಿತ ಬಗ್ಗೆ ತಿಳಿಸಿ ಜೆಡಿಎಸ್ ಗೆ ಮತ ಕೇಳಿ ಗುಬ್ಬಿ ಕ್ಷೇತ್ರದಲ್ಲಿ ನಾಗರಾಜು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಜಿ.ಎಂ.ಶಿವಲಿಂಗಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಳ್ಳಿಪಾಳ್ಯ ಲೋಕೇಶ್, ಸಿ.ಎಂ.ಹಿತೇಶ್, ಪಪಂ ಮಾಜಿ ಅಧ್ಯಕ್ಷ ಜಿ.ಡಿ. ಸುರೇಶಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಯ್ಯ, ಫಿರ್ದೋಸ್ ಆಲಿ, ಗಂಗಾಧರ್ ಇತರರು ಇದ್ದರು.