Sunday, 15th December 2024

ಮಾನ್ವಿ: ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಕಳವು

ಮಾನ್ವಿ : ಪಟ್ಟಣದ ಎಪಿಎಂಸಿ ಯಾರ್ಡ್‌ ನಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ಏಜೇನ್ಸಿಯ ಐಟಿಸಿ ಕಂಪನಿ ಡಿಸ್ಟ್ರಿಬ್ಯೂಟರಿ ಏಜೆನ್ಸಿ ಮಳಿಗೆಯಲ್ಲಿ ಜ.07 ಭಾನುವಾರ ಬೆಳ್ಳಂ ಬೆಳಗ್ಗೆ 1: 30 ಕ್ಕೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಕಳ್ಳತನ ಆಗಿರುವ ಘಟನೆ ಜರುಗಿದೆ.

ಮಳಿಗೆಯ ಕಿಟಕಿಯ ಗಾಜು ಮತ್ತು ಸರಳುಗಳ ಮುರಿದು ಒಳಗೆ ನುಗ್ಗಿದ ಕಳ್ಳರು ಮೊದಲು ಸಿಸಿ ಕ್ಯಾಮೆರಾ ಸಂಪರ್ಕದ ವೈಯರ್‌ಗಳನ್ನು ಕತ್ತರಿಸಿ ಮೊದಲು ಕ್ಯಾಶ್ ಕೌಂಟರ್ ನಲ್ಲಿದ್ದ ಅಂದಾಜು 40 ಸಾವಿರ ರೂ.ನಗದು ತೆಗೆದುಕೊಂಡು ಅದರಲ್ಲಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ಒಳಗಿನ ಕೋಣೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಲಕ್ಷಾಂತರ ರೂ.ಮೌಲ್ಯದ ಐಟಿಸಿ ಕಂಪನಿಯ ವಿವಿಧ ಬಗೆಯ ಸಿಗರೇಟು ಹಾಗೂ ಇನ್ನಿತರ ವಸ್ತುಗಳ ಬಾಕ್ಸ್ ಹೊತ್ತೊಯ್ದಿದ್ದಾರೆ. ಏಜೇನ್ಸಿಯ ಮಾಲಿಕರಾದ ಶ್ರೀಮತಿ ನಾಗಲಾಂಬಿಕ ಹನುಮಂತಗೌಡ ನಕ್ಕುಂದಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ಪಿ.ಐ ವೀರಭದ್ರಯ್ಯ ಸ್ವಾಮಿ ಹಿರೇಮಠ ಪೊಲೀಸರ ಸಮೇತ ಶ್ವಾನದಳ ಕರೆಸಿ ತಪಾಸಣೆ ಮಾಡಿದ್ದಾರೆ.

ಈ ಹಿಂದೆ 2017 ರಲ್ಲಿ ಇದೇ ಕಂಪನಿಯ ಗೋದಾಮಿನಲ್ಲಿ ಕಳ್ಳತನ ನಡೆದು ಆಗಲೂ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ ಎಂಬುವುದು ಮಾತ್ರ ವಿಶೇಷವಾಗಿದೆ. ಕಳೆದ ಒಂದು ವಾರದಿಂದ ಪಟ್ಟಣದ ವಿವಿಧ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಗಳಾಗಿದ್ದು ಈಗ ನಡೆದ ಕಳ್ಳತನ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದು ಎಷ್ಟರಮಟ್ಟಿಗೆ ಕಳ್ಳರನ್ನು ಹಿಡಿಯು ತ್ತಾರೋ ಕಾದು ನೋಡಬೇಕಾಗಿದೆ.