Friday, 22nd November 2024

Mandya Violence: ರಾಜ್ಯ ಸರ್ಕಾರ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು: ನಿಖಿಲ್ ಕುಮಾರಸ್ವಾಮಿ

Nikhil Kumaraswamy

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಒಂದು ಸಮುದಾಯದ ಪುಂಡರು ನಡೆಸಿದ ದಾಳಿಯನ್ನು (Mandya Violence) ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಈ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡದೇ ಮತಾಂಧ ಶಕ್ತಿಗಳನ್ನು ಹತ್ತಿಕ್ಕಬೇಕು. ಈ ಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Mandya Violence: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಉದ್ದೇಶ ಪೂರ್ವಕವಾಗಿಯೇ ಅನ್ಯ ಕೋಮಿನ ಪುಂಡರಿಂದ ದಾಂಧಲೆ; ಎಚ್‌ಡಿಕೆ ವಾಗ್ದಾಳಿ

ಕೆರಗೋಡು ಹನುಮ ಧ್ವಜ ತೆರವು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಂತರ ಈ ಸರ್ಕಾರವು ಹೇಗೆ ದೇಶ ವಿರೋಧಿ ಶಕ್ತಿಗಳಿಗೆ ರಾಜ್ಯವನ್ನು ಒತ್ತೆ ಇಟ್ಟಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ ಎಂದು ದೂರಿದರು.

ಗಣೇಶ ವಿಸರ್ಜನೆ ವೇಳೆ ಮತಾಂಧರು ದೂರ್ತತನ ಪ್ರದರ್ಶಿಸಿದ್ದಾರೆ. ಗಣಪತಿ ಭಕ್ತರ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಈ ಘಟನೆಗೆ ಕೋಮು ದಳ್ಳುರಿ ಹೊತ್ತಿಸಿ ಜನರು, ಪೊಲೀಸರ ಮೇಲೆ ಪೂರ್ವಯೋಜಿತವಾಗಿ ದೌರ್ಜನ್ಯ ನಡೆಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ.

ಕಲ್ಲುಗಳ ಸುರಿಮಳೆಗರೆದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಪ್ರಚೋದಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಇರುವುದರಿಂದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | Mandya Violence: ಮಂಡ್ಯ ಗಲಭೆ ಖಂಡಿಸಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ

ರಾಜಕೀಯ ಸ್ವಾರ್ಥಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೇಶವಿರೋಧಿ ಶಕ್ತಿಗಳನ್ನು ಹುರಿದುಂಬಿಸಿ ಓಲೈಕೆ ರಾಜಕಾರಣ ಮಾಡುತ್ತಿರುವುದರ ಪರಿಣಾಮ ಇದು. ಹಿಂದೂಗಳ ಮೇಲಿನ ಈ ದಾಳಿಗೆ ಪ್ರತಿಯಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಂದು ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.