Saturday, 14th December 2024

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಮಂಗಳಮುಖಿ ಚಾಲನೆ

ತುಮಕೂರು: ನಗರದ ಡಿ.ಎ.ಆರ್. ಮೈದಾನದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಮೈಸೂರು ಜಿಲ್ಲೆ ಸಾಲಿಗ್ರಾಮ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಮಂಗಳಮುಖಿ ದೇವಿಕ  ಪಾರಿವಾಳ ಮತ್ತು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ನಂತರ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣದ ಅರ್ಹತೆ ಹೊಂದಿರುವ ಮಂಗಳಮುಖಿ ಯರಿಗೆ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಂಗಳಮುಖಿಯರಲ್ಲಿ ಓದಿದವರು ಇದ್ದಾರೆ. ಅಂತಹವರಿಗೆ ಸರ್ಕಾರಿ ಉದ್ಯೋಗ ನೀಡಿದರೆ ಬದುಕಿಗೆ ತುಂಬಾ ಅನುಕೂಲ ವಾಗಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.
ಮಂಗಳಮುಖಿಯರು ಇರಲು ಸೂರು ಇಲ್ಲದೆ ಬದುಕು ದೂಡುವಂತಾಗಿದೆ. ಸರ್ಕಾರ ಮಂಗಳಮುಖಿಯರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಸಿಕೊಡುವ ಮೂಲಕ ಇತರರಂತೆ ಸಮಾಜದಲ್ಲಿ ಬದುಕು ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
ಮಂಗಳಮುಖಿಯರು ಎಲ್ಲೇ ಇರಲಿ, ಹೇಗೆ ಇರಲಿ ಪೊಲೀಸ್ ಅಧಿಕಾರಿಗಳು ತುಂಬಾ ಸಹಾಯ ಮಾಡುತ್ತಾರೆ. ನಮಗೆ ಸದಾ ಪೊಲೀಸರ ಸಹಕಾರ ಅತ್ಯವಶ್ಯವಾಗಿದೆ ಎಂದರು.
ಮಂಗಳಮುಖಿಯರು ಸಾಧನೆ ಮಾಡಲು ಕುಟುಂಬದವರೇ ಸಹಕರಿಸುವುದಿಲ್ಲ. ಎಷ್ಟೋ ತಾಯಿ ತಂದೆ, ಅಣ್ಣ ತಮ್ಮಂದಿರುವ ಮಂಗಳಮುಖಿಯರು ಎಂದಾಕ್ಷಣ ಮನೆಯಿಂದ ಹೊರಗೆ ಹಾಕುತ್ತಾರೆ. ಹೀಗಾಗಿ ಮಂಗಳಮುಖಿಯರಾದ ನಾವು ಭಿಕ್ಷಾಟನೆ ಮಾಡುತ್ತಾ ಜೀವನ ನಡೆಸಬೇಕಾಗಿದೆ ಎಂದರು.
ಜನಸಾಮಾನ್ಯರು ನೀಡುವ ಕಾಣಿಕೆ ಹಣದಲ್ಲಿ ಮಂಗಳಮುಖಿಯರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಜತೆಗೆ ಬಡವರಿಗೂ ದಾನ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉಪವಿಭಾಗದ ಪೊಲೀಸ್ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್, ತಿಪಟೂರು ಉಪವಿಭಾಗದ ಎಎಸ್ಪಿ ಸಿದ್ದಾರ್ಥ ಸೇರಿದಂತೆ ಜಿಲ್ಲೆಯ ಎಲ್ಲ ಉಪವಿಭಾಗಾಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.