ಮಂಗಳೂರು: ಕಳೆದ ವಾರ ಕರ್ನಾಟಕ – ತಮಿಳುನಾಡು ಗಡಿಯಲ್ಲಿನ ಅತ್ತಿಬೆಲೆಯ ಪಟಾಕಿ ಮಳಿಗೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 14 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದರು. ಈ ದುರಂತ ಮಾಸುವ ಮುನ್ನವೇ ಇದೀಗ ಮಂಗಳೂರಿನಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಬೆಂಕಿಗಾಹುತಿಯಾದ ಘಟನೆ ಮಂಗಳೂರಿನ ಬೆಂಗ್ರೆಯ ಮೀನು ಗಾರಿಕಾ ಬಂದರಿನಲ್ಲಿ ನಡೆದಿದೆ. ಮಂಗಳವಾರ ಮುಂಜಾನೆ ಲಂಗರು ಹಾಕಿ ಬಂದರಿನಲ್ಲಿ ನಿಲ್ಲಿಸಿದ್ದ ಬೋಟ್‌ನ ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಏಕಾಏಕಿ ಕಾಣಿಸಿಕೊಂಡ ಬೆಂಕಿಗೆ ನೋಡ ನೋಡುತ್ತಿದ್ದಂತೆ ಸಂಪೂರ್ಣ ಬೋಟ್ ಹೊತ್ತಿ ಉರಿದಿದೆ. ಲಂಗರು ಹಾಕಿರುವ ಬೋಟ್‌ಗಳಿಗೆ ಬೆಂಕಿ ಹರಡುವ ಮುನ್ನ ಎಚ್ಚೆತ್ತ ಮೀನುಗಾರರು ಬೆಂಕಿ ತಗುಲಿದ ಬೋಟನ್ನು ಬಂದರಿನಿಂದ ನದಿ ಕಡೆಗೆ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೀವನಾಧಾರವಾಗಿದ್ದ ಬೋಟ್ ಸುಟ್ಟು ಭಸ್ಮವಾಗಿರುವುದನ್ನು ಕಂಡು ಮಾಲೀಕರು ಹಾಗೂ ಬೋಟ್‌ನ ಕಾರ್ಮಿಕರು ಸಂಕಟ ಪಟ್ಟಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.