Thursday, 12th December 2024

ಗಾಯಕಿ ಮಂಗ್ಲಿಯಿಂದ‌ ಸಾಂಸ್ಕೃತಿಕ ಸಂಜೆ:ಕುಣಿದು ಕುಪ್ಪಳಿಸಿದ ಯುವ ಸಮೂಹ

ಕಲಬುರಗಿ: ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಶನಿವಾರ‌ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ‌ ಅಂಗವಾಗಿ ಸಾಯಂಕಾಲ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಸಂಜೆಯಲ್ಲಿ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿಯ ಗೀತಗಾಯನಕ್ಕೆ ಯುವಪಡೆ ಕುಣಿದು ಕುಪ್ಪಳಿಸಿದರು.

ಸಂಸದ‌ ಡಾ.ಉಮೇಶ ಜಾಧವ ಅವರನ್ನು ರಾಮ್ ರಾಮ್ ಎಂದು, ಕಂದಾಯ ಸಚಿವ ಆರ್.ಅಶೋಕ ಅವರನ್ನು ಕುಶಲೋಪರಿ ವಿಚಾರಿಸಿದ‌ ಮಂಗ್ಲಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ‌ ಅವರೇ ನೀವೂ ಹೀಗೇ ನಗ್ತಾ ಇರಬೇಕೆಂದು ಹೇಳಿ ತಮ್ಮ ಸಹೋದರಿ ಸಿಂಗರ್ ಸಿಮ್ರನ್ ಜೊತೆಗೆ “ಸಾಧು ಜಂಗಮ” ಹಾಡಿನಿಂದ ಗೀತಗಾಯನ ಅರಂಭಿಸಿದರು. “ಸೇವಾಲಾಲ ಮಹಾರಾಜ” , “ಬಂಜಾರಾ ಸಾಂಗ್” “ಯೋಗಿ ನಮ್ಮನ್ನೆ” ಹೀಗೆ ಏಳೆಂಟು ಹಾಡುಗಳನ್ನು ಹಾಡಿ‌ ಸಂಗೀತ‌ ಆಸಕ್ತರಿಗೆ ರಸದೌತಣ‌ ನೀಡಿದರು.

ನಟ ಸುದೀಪ್ ಅಭಿನಯದ ಕನ್ನಡದ ವಿಕ್ರಾಂತ ರೋಣ ಚಿತ್ರದ “ರಾ.ರಾ.ರಕ್ಕಮ್ಮ”, ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಚಿತ್ರದ “ಕಣ್ಣು ಹೊಡೆಯಾಕಾ ಮೊನ್ನೆ‌ ಕಲ್ತೀನಿ”, ತೆಲುಗಿನ‌ ಅಲ್ಬಂ ಸಾಂಗ್ ನರಸಪಲ್ಲೆ-ನರಸಪಲ್ಲೆ ಗೀತೆ ಹಾಡಿದಾಗಂತಲು ಶಾಲಾ‌ ಮಕ್ಕಳು ಕುರ್ಚಿ ಮೇಲೆ ಎದ್ದು ನಿಂತು ಕುಣಿದು ಸಂಭ್ರಮಪಟ್ಟರು. ತನ್ನೊಂದಿಗೆ ರಾ.ರಾ.ರಕ್ಕಮ್ಮ ಗೀತೆಗೆ ಪ್ರೇಕ್ಷಕರನ್ನು ಹಾಡಿಗೆ ಎಳೆದವರು ಮಂಗ್ಲಿ.

ಮಂಗ್ಲಿ ಅವರ‌ 45 ನಿಮಿಷದ ಸಂಗೀತ ಸಂಜೆ ಯಶಸ್ಸಿಗೆ ಸಹ ಗಾಯಕರಾದ ರಾಜು, ಇಂದ್ರಾವತಿ ಸಾಥ್ ನೀಡಿದರು. ಗಿಟಾರ್ ನಲ್ಲಿ ಸುಬಾನಿ, ರಫಿ ಮತ್ತು ರುತ್ವಿಕ್ ಕೀಬೋರ್ಡ್ ನುಡಿಸಿದರು. ಬನ್ನು ಡ್ರಮ್ಮರ್ ಬಾರಿಸಿದರೆ, ಡ್ಯಾನಿ ಬೇಸ್ ಗಿಟಾರ್ ನೋಡಿ ಕೊಂಡರು. ವ್ಯವಸ್ಥಾಪಕ ರಾಜು ನಿರ್ವಹಣೆ ಮಾಡಿದರು.

ಅಪ್ಪುಗೆ ನಮನ; ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮತ್ತು ಅವರ ಧರ್ಮಪತ್ನಿ ಸಂತೋಷಿರಾಣಿ ಪಾಟೀಲ ಹಾಗೂ ಸಹೋದರ ಶಿವಕುಮಾರ ಪಾಟೀಲ ಅವರು ನಟ ಪುನಿತ್ ರಾಜಕುಮಾರ ಅಭಿನಯದ “ರಾಜಕುಮಾರ” ಚಿತ್ರದ ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ ಚಿತ್ರಗೀತೆ ಹಾಡಿ ನೆರೆದ ಸಂಗೀತ ಅಭಿಮಾನಿಗಳನ್ನು ರಂಜಿಸಿದರು. ಈ ಹಾಡಿಗೆ ಪ್ರೇಕ್ಷಕರು ತಮ್ಮ ಮೋಬೈಲ್ ಟಾರ್ಚ್ ಹಾಕುವ ಮೂಲಕ ಅಗಲಿದ ಕರ್ನಾಟಕದ ರತ್ನನಿಗೆ ಗೌರವ ಸಮರ್ಪಿಸಿ ದರು.

ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವ ತನ್ನ ನಟನೆಯ ಬಾಲ್ಯ ವಿವಾಹ ನಿಯಂತ್ರಣದ ಕುರಿತು ಸಾಮಾಜಿಕ ಸಂದೇಶ ನೀಡುವ ಪುಟ್ಟ ಗೌರಿ, ಕನ್ನಡತಿ ಧಾರಾವಾಹಿ ಕುರಿತು ಮಾತನಾಡಿದಲ್ಲದೆ ಪುಟ್ಟ ಗೌರಿ ಧಾರಾವಾಹಿಯ ಹಾಡು ಹಾಡಿ ಸಭಿಕರ‌ ಮನಗೆದ್ದರು. ಪತ್ರಕರ್ತ ಗೋಪಾಲರಾವ ಕುಲಕರ್ಣಿ ಅವರು ಆಪ್ತರಕ್ಷಕ ಚಿತ್ರದ “ಗರನೆ ಗರ-ಗರನೆ ಹಾಡು ಹಾಡಿದರು. ಇದಲ್ಲದೆ ಸ್ಥಳೀಯ ಶಾಲಾ‌ ಮಕ್ಕಳಿಂದಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಂದಾಯ ಸಚಿವ ಆರ್.ಅಶೋಕ, ಸಂಸದ ಡಾ.ಉಮೇಶ ಜಾಧವ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಅಪರ‌ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹೆಚ್ಚುಚರಿ ಎಸ್.ಪಿ. ಪ್ರಸನ್ನ ದೇಸಾಯಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ, ಸಹಾಯಕ ಆಯುಕ್ತ ಕಾರ್ತಿಕ್, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳು, ಮಹಿಳೆಯರು, ಮಕ್ಕಳು ಇದಕ್ಕೆ ಸಾಕ್ಷಿಯಾದರು.

ಚಪ್ಪಾಳೆ ತಟ್ರೋ ಎನ್ನುತ್ತಲೆ ನಿರೂಪಕಿ ಕಂ‌ ನಟಿ ಚೈತ್ರಾ ವಾಸುದೇವನ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.