Saturday, 14th December 2024

ಮಂತ್ರಿ ಮಾಲ್ ಇಂದಿನಿಂದ ಮತ್ತೆ ಓಪನ್

ಬೆಂಗಳೂರು: ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಒಂದು ವಾರದಿಂದ ಬಂದ್ ಆಗಿದ್ದಂತಹ ಪ್ರತಿಷ್ಠಿತ ಮಂತ್ರಿ ಮಾಲ್ ಇಂದಿನಿಂದ ಮತ್ತೆ ಓಪನ್ ಆಗಿದೆ.

ಆಸ್ತಿ ತೆರಿಗೆ ಹಣದ ಪೈಕಿ 20 ಕೋಟಿ ರೂಪಾಯಿಯನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಮಲ್ಲೇಶ್ವರದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ಗೆ ಸೂಚಿಸಿದೆ.

ಮಾಲ್‌ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲ್‌ ಮಾಲೀಕರಾಗಿರುವ ಅಭಿಷೇಕ್‌ ಪ್ರಾಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರ ಕಂಪೆನಿಯ ಹಣಕಾಸು ಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಿ, 2024ರ ಜುಲೈ 31ರೊಳಗೆ 20 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿಗೆ ಪಾವತಿಸಲಾಗು ವುದು ಎಂದು ಪೀಠಕ್ಕೆ ಭರವಸೆ ನೀಡಿದರು.

ಬೆಳಗ್ಗೆ 10 ಗಂಟೆಯಿಂದ ಮಾಲ್‌ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಮಾಡಿತು.