ಚಿಕ್ಕಬಳ್ಳಾಪುರ : ರಾಜ್‌ಕುಮಾರ್ ಮತ್ತು ಅವರ ಕುಟುಂಬ ನಾಡು ನುಡಿಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಕನ್ನಡದ ನಿಜದ ರಾಯಭಾರಿಗಳಾಗಿದ್ದಾರೆ.ಇವರಂತೆ ರಾಜ್ಯ ಸಾರಿಗೆ ನೌಕರರು ಕೂಡ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್(Manu Baligar) ಹೇಳಿದರು
ನಗರದ ಕ.ರಾ.ರ.ಸಾ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಘಟಕ ಕಚೇರಿಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್ ಸಂಸ್ಮರಣೆ ಸಮಾರಂಭ ಹಾಗೂ ೬೯ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿ ಭುವನೇಶ್ವರಿಯನ್ನು ಸ್ತುತಿಸುವ ನಾಡ ಹಬ್ಬವಾದ ರಾಜ್ಯೋತ್ಸವ ಕನ್ನಡಿಗರ ಹೆಮ್ಮೆಯ ಕಾರ್ಯಕ್ರಮವಾಗಿದೆ. ಈ ಮೂಲಕ ಅಖಂಡ ಕರ್ನಾಟಕದ ಏಳುಬೀಳುಗಳ ಕುರಿತು ಬೆಳಕು ಚೆಲ್ಲುವ ಕೆಲಸವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.ಚಿಕ್ಕಬಳ್ಳಾಪುರ ಸಾರಿಗೆ ಸಂಸ್ಥೆಯ ಬಂಧುಗಳು ರಾಜ್‌ಕುಮಾರ್ ಬದುಕಿನ ಸ್ಮರಣೋತ್ಸವದ ಮೂಲಕ ರಾಜ್ಯೋತ್ಸವ ಆಚರಿಸುತ್ತಿರುವುದು ವಿಶೇಷವಾಗಿದೆ.
ಎಸ್.ಎ.ಚಿನ್ನೇಗೌಡ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವಂತೆ, ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಕನ್ನಡ ಕೆಲಸ ಆಗಬೇಕಾದರೆ ರಾಜ್ ಕುಮಾರ್ ಅವರ ಅವರ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿದರೆ ಸಾಕಿತ್ತು. ಕುಮಾರಗಂಧರ್ವರ ರಂಗಮAದಿರ ಕಟ್ಟಲು ಅವರನ್ನು ಬೆಳಗಾವಿಗೆ ಕರೆಸಿ ಕಾರ್ಯಕ್ರಮ ಮಾಡಿದಾಗ, ನಿಮ್ಮ ಸಂಭಾವನೆ ಎಷ್ಟು ಸರ್ ಎಂದು ಕೇಳಿದರೆ ಅವರು ನಯಾಪೈಸೆ ತೆಗೆದುಕೊಳ್ಳದೆ ಉಚಿತವಾಗಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಸಾಧಕರಿಗೆ ಗೌರವ ಸಲ್ಲಿಸಿದರು.ಇದು ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವನ್ನು ಕೊಟ್ಟ ಘಟನೆ ಎಂದು ಹೇಳಿದರು.
ರಾಜ್ ರಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಜ್‌ಕುಮಾರ್ ಭಾಮೈದ ಎಸ್.ಎ.ಚೆನ್ನೇಗೌಡ ಮಾತೃಭಾಷೆಗೆ ನವಚೈತನ್ಯ ಮೂಡಿಸಿದ ಕನ್ನಡದ ಅನಭಿಷಿಕ್ತ ದೊರೆ ಎಂದರೆ ಡಾ.ರಾಜ್‌ಕುಮಾರ್ ಮಾತ್ರ ಎನ್ನುವುದು ಎಂದೆಂದಿಗೂ ಸತ್ಯವಾದ ಮಾತು.ರಾಜಣ್ಣ ನಟೆನೆಯ ಎಲ್ಲಾ ಚಲನಚಿತ್ರಗಳು ಕನ್ನಡದ ಮಟ್ಟಿಗೆ ಅನರ್ಘ್ಯ ರತ್ನಗಳೇ ಸರಿ.ಭೌತಿಕವಾಗಿ ಅವರು ಮರೆಯಾಗಿದ್ದರೂ,ಅವರ ಪ್ರಭಾವ ಪ್ರೇರಣೆ ಕಡಿಮೆ ಯಾಗಿಲ್ಲ. ಇವರಂತೆಯೇ ನಾಡಿನ ಉದ್ದಗಲ್ಲಕ್ಕೂ ಇವತ್ತು ಏನಾದರೂ ಕನ್ನಡ ಉಳಿಯುತ್ತಿದೆ ಎಂದರೆ ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಂದ ಮಾತ್ರ ಎನ್ನುತ್ತಿರುವುದು ಕೂಡ ಸತ್ಯವೇ ಆಗಿದೆ. ರಾಜ್‌ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಕನ್ನಡಿಗರ ಭಗವಧ್ಗೀತೆ ಎಂದರೆ ತಪ್ಪಲ್ಲ.ಚಿಕ್ಕಬಳ್ಳಾಪುರದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಅವರ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ನಿಜಕ್ಕೂ ಮನಸ್ಸಿಗೆ ಸಂತೋಷ ತಂದಿದೆ.ನಾಡು ಪ್ರೇಮ ಭಾಷಾ ಪ್ರೇಮ ಹೀಗೆಯೇ ನೂರ್ಕಾಲ ಸಾಗಲಿ, ಕನ್ನಡಿಗರ ಆರಾಧ್ಯ ದೈವ ಡಾ.ರಾಜ್ ಅವರ ಪ್ರೇರಣೆ ಕನ್ನಡಿಗರ ಮೇಲೆ ಸದಾಯಿರಲಿ ಎಂದು ಹಾರೈಸಿದರು.
ಕ.ರಾ.ರ.ಸಾ.ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ ಡಾ.ರಾಜ್ ಕುಮಾರ್ ಜೀವಂತವಾಗಿರುವಷ್ಟು ದಿನ ನಾಡಿನಲ್ಲಿ ಕನ್ನಡದ ಮೇಲಿನ ಪರಭಾಷಿಕರ ಆಕ್ರಮ,ಕನ್ನಡಿಗರಿಗೆ ಉದ್ಯೋಗ ವಂಚನೆ ಆಗುತ್ತಿರಲಿಲ್ಲ. ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸದಾಶಿವನಗರದಲ್ಲಿನ ದೈತ್ಯ ಪ್ರತಿಭೆ ಹೊರಗೆ ಬರುತ್ತದೆ ಎಂಬ ಭಯ ಹೊರರಾಜ್ಯದವರಿಗೆ ಇತ್ತು.ಆನಿಟ್ಟಿನಲ್ಲಿ ರಾಜ್‌ಕುಮಾರ್ ಕರ್ನಾಟಕ ಕನ್ನಡದ ವಜ್ರಕವಚವಾಗಿದ್ದ ದೈತ್ಯ ಶಕ್ತಿ.ಇವರು ಬದುಕಿದ್ದ ಕಾಲದಲ್ಲಿ ಯಾವ ಕಾವೇರಿ ಗಲಾಟೆಯಾಗಲಿ, ಭಾಷಾವಿವಾದ, ಉದ್ಯೋಗ ಸಮಸ್ಯೆ, ಭಾಷಾ ಸಮಸ್ಯೆ ಬರುತ್ತಿರಲಿಲ್ಲ.ಕನ್ನಡದಲ್ಲಿ ರಾಜ್ ಮಾರ್ಗವೊಂದಿದೆ
.ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಸಾರಿಗೆ ನೌಕರರು ರಾಜ್ ಸ್ಮರಣೆ ನೆನಪಲ್ಲಿ ರಾಜ್ಯೋತ್ಸವ ಆಚರಿಸುತ್ತಿರಿಸುತ್ತಾ ಅವರ ಹೆಸರಿನಲ್ಲಿ ಸಂಸ್ಥೆಯ ನೌಕರರಿಗೆ ಡಾ.ರಾಜ್‌ರಂಗ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ನನ್ನನ್ನು ಕರೆಸಿ ಒಂದೆರಡು ಮಾತುಗಳನ್ನು ಆಡಲು ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಚಲನಚಿತ್ರ ಕಲಾವಿದ,ನಿರ್ಮಾಪಕ ದರ್ಶನ್,ಕೆ.ಎಸ್.ಆರ್.ಟಿ.ಸಿ ತುಮಕೂರು ವಿಭಾಗದ ಶಿವಲೀಲಾ, ಕೋಲಾರ ವಿಭಾಗದ ವೆಂಕಟರಮಣ,ಮೈಸೂರು ನಗರ ವಿಭಾಗದ ಸಿದ್ದೇಗೌಡ,ಮಂಡ್ಯವಿಭಾಗದ ಡಿ.ಎಂ.ಮಂಜುನಾಥ್, ರಾಮನಗರ ವಿಭಾಗದ ಹೆಚ್.ಸಿ,ಮಂಜುನಾಥ್,ಪ್ರಾದೇಶಿಕ ಕಾರ್ಯಾಗಾರದ ಗುರುಮೂರ್ತಿ,ಬೆಂಗಳೂರು ಕೇಂದ್ರ ವಿಭಾಗದ ಶಿವಮುತ್ತಯ್ಯ, ಚಿಕ್ಕಬಳ್ಳಾಪುರ ವಿಭಾಗದ ವೆಂಕಟೇಶಪ್ಪ,ನವೀನ್‌ಕುಮಾರ್,ಆರ್.ಸುರೇಶ್‌ಬಾಬು, ಟಿ.ಎ.ದ್ಯಾವಪ್ಪ, ಚಿದಂಬರ್ ಸೇರಿ ೧೩ ಮಂದಿಗೆ ಡಾ.ರಾಜ್ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಜಿ.ಪ್ರಕಾಶ್, ವಿಭಾಗೀಯ ಅಧ್ಯಕ್ಷ ಸುರೇಶ್‌ಬಾಬು, ಗೌರವಾಧ್ಯಕ್ಷ ಎನ್.ಶ್ರೀನಿವಾಸಯ್ಯ, ಉಪಾಧ್ಯಕ್ಷ ತಿಮ್ಮೇಗೌಡ, ಖಜಾಂಚಿ ರವಿ, ಕಾರ್ಯದರ್ಶಿ ಮಂಜುನಾಥ್ ಇತರರು ಇದ್ದರು.