Sunday, 15th December 2024

ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ: ಮಯೂರ ಜಯಕುಮಾರ್

ತುಮಕೂರು: ಕರ್ನಾಟಕದ ಜನತೆ ಬದಲಾವಣೆ ಬಯಸುತಿದ್ದು, ಇದನ್ನು ಸಕಾರಗೊಳ್ಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಪ್ರತಿ ಬ್ಲಾಕ್ ಮತ್ತು ಬೂತ್ ಹಂತದಲ್ಲಿ ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಮಯೂರ ಜಯಕುಮಾರ್ ತಿಳಿಸಿದ್ದಾರೆ.
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್.ಎಂ.ಎಸ್.ಕಾಲೇಜು ಆವರಣದಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪ್ರಸ್ತುತ ಬಿಜೆಪಿ ಸರಕಾರದಿಂದ ಜನರಿಗೆ ಯಾವುದೇ ರೀತಿಯ ಅನುಕೂಲವಿಲ್ಲ. ಜಿ.ಎಸ್.ಟಿ, ಇನ್ನಿತರ ತೆರಿಗೆಗಳ ಮೂಲಕ ಸಾಕಷ್ಟು ಹಣ ವ್ಯಯಿಸುತಿದ್ದಾರೆ.ಆದರೆ ಅದರ ಬಹುಪಾಲು ರಾಜ್ಯದ ಅಭಿವೃದ್ದಿಗೆ ಬಳಕೆ ಯಾಗುತ್ತಿಲ್ಲ. ಬದಲಾಗಿ ಬಿಜೆಪಿ ಶಾಸಕರು, ಅವರ ಹಿಂಬಾಲಕರ ಜೇಬು ಸೇರುತ್ತಿದೆ.
ಕಾಂಗ್ರೆಸ್ ಸರಕಾರವಿದ್ದಾಗ ಜಾರಿಗೆ ತಂದ ಅನೇಕ ಜನಪರ, ಬಡವರ ಪರ ಕಾರ್ಯಕ್ರಮ ಗಳು ರದ್ದಾಗಿವೆ.ಇಂದಿರಾ ಕ್ಯಾಂಟೀನ್‌ನಂತಹ ಯೋಜನೆ ರದ್ದಾಗಿರುವುದು ನಿಜಕ್ಕೂ ಈ ಸರಕಾರ ಯಾರ ಪರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹಾಗಾಗಿ ಕೇವಲ ಕಚೇರಿ ಉದ್ಘಾಟಿಸಿದರೆ ಸಾಲದು, ಪ್ರತಿ ದಿನ ಬ್ಲಾಕ್ ಮತ್ತು ಬೂತ್ ಲೇವಲ್ ಕಾರ್ಯಕರ್ತರು ಕೂತು ಚರ್ಚೆ ನಡೆಸಿ,ಜನರ ಸಮಸ್ಯೆಗಳನಿಟ್ಟು ಚರ್ಚೆ ನಡೆಸಿ, ಜನರ ಮುಂದಿಡುವ ಕೆಲಸ ಮಾಡಬೇಕೆಂದು ಮಯೂರ ಜಯಕುಮಾರ್ ಸೂಚಿಸಿದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ,ಇಂದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕಾಲವಿರಬಹುದು. ಆದರೆ ಎಂದಿಗೂ ಕಾರ್ಯ ಕರ್ತರು ಎದೆಗುಂದಬಾರದು.ಎಲ್ಲರೂ ಒಗ್ಗೂಡಿ ಮುನ್ನೆಡೆದರೆ ಗೆಲುವು ನಿಶ್ಚಿತ ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷದ ಹೈಕಮಾಂಡ್ ನೀಡುವ ಸೂಚನೆಗಳನ್ನು ಪಾಲಿಸುತ್ತಾ ಪಕ್ಷವನ್ನು ಸಂಘಟಿಸಿ,ಮುಂದಿನ ಚುನಾವಣೆಯಲ್ಲಿ 11ಕ್ಕೆ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಂತೆ ಮಾಡಬೇಕೆಂದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ತುಮಕೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟಿಸುವ ಮೂಲಕ ಹೊಸ ಶಕ್ತಿ ತುಂಬಿದೆ.ವಾಮ ಮಾರ್ಗದ ಮೂಲಕ ಗೆಲುವ ಕನಸು ಕಾಣುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ,ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆಯುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಈ ಕಚೇರಿಯನ್ನು ಪಕ್ಷ ಸಂಘಟನೆಗೆ ಬಳಕೆ ಮಾಡಿ ಕೊಳ್ಳಬಹುದು ಎಂದು ಸಲಹೆ ನೀಡಿದರು.
ತುಮಕೂರು ನಗರ ಕ್ಷೇತ್ರದ ಉಸ್ತುವಾರಿ ಕೇಶವಮೂರ್ತಿ, ಮಾಜಿ ಅಧ್ಯಕ್ಷರಾದ ಕೆಂಚಮಾರಯ್ಯ,ಮೇಯರ್ ಪ್ರಭಾವತಿ ಸುಧೀಶ್ವರ್, ಹೊನ್ನಗಿರಿಗೌಡ, ಗೀತಾರುದ್ರೇಶ್, ನಯಾಜ್ ಅಹಮದ್, ಗೀತಾರುದ್ರೇಶ್, ಫರ್ಜಾನಾ ಖಾನಂ, ರೆಡ್ಡಿ ಚಿನ್ನಯಲ್ಲಪ್ಪ, ಬಾಲಕೃಷ್ಣ  ಸೇರಿದಂತೆ ಹಲವರು ಉಪಸ್ಥಿತರಿದ್ದರು.