ಚಿಂಚೋಳಿ: ತಾಲೂಕಿನ ಗಡಿ ಭಾಗದ ಕೊಂಚಾವರಂ ಗ್ರಾಮದಲ್ಲಿರುವ ಸಮಾಜಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ರಾತ್ರಿ ಆಹಾರ ಸೇವಿಸಿ, ವಿದ್ಯಾರ್ಥಿಗಳು ಅಸ್ವಸ್ಥರಾಗಿ ಬೀದರ್ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಬಾಲಾಜಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆದೇಶಿಸಿದರು. ಶಾಲೆಯ ಮುಖ್ಯ ಗುರುಗಳಿಗೆ ಮಕ್ಕಳಿಗೆ ಕಡ್ಡಾಯವಾಗಿ ಕುಡಿಯಲು ಶುದ್ಧನೀರು ಹಾಗೂ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳುವಂತೆ ಸಮಾಜ ಕಲ್ಯಾಣ ಅಧಿಕಾರಿ ಪ್ರಭುಲಿಂಗ ಬುಳ್ಳ ಅವರಿಗೆ ಸೂಚಿಸಿದರು.
ಚಿಂಚೋಳಿ ಕಾಂಗ್ರೇಸ್ ಮುಖಂಡ ಸುಭಾಷ್ ರಾಠೋಡ್ ಅವರು ಶಾಲೆಗೆ ಭೇಟಿ ನೀಡಿ ಶಾಲೆಯನ್ನು ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಶಾಲೆಯ ಸಿಬ್ಬಂದಿ ವರ್ಗಕ್ಕೆ ತಿಳಿಸಿದರು. ಅಲ್ಲದೆ, ವಸತಿ ನಿಲಯ ದಲ್ಲಿ ಅಡುಗೆ ಕೊಣೆ, ವಿದ್ಯಾರ್ಥಿಗಳು ಮಲಗುವ ಕೋಣೆ, ಕುಡಿಯುವ ನೀರಿನ ಟ್ಯಾಂಕ್ ನ್ನು ಪರಿಶೀಲಿಸಿದರು. ವಸತಿಯಲ್ಲಿ ಸ್ವಚ್ಛವಾಗಿಡಿ ಹಾಗೂ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುವಂತೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಮಲಿ, ವಕ್ತರರಾದ ಶರಣು ಪಾಟೀಲ ಮೋತಕಪಳ್ಳಿ, ಮುಖಂಡರಾದ ಕಸ್ತೂರಿ ವೆಂಕಟರೆಡ್ಡಿ, ಡಾ. ತುಕಾರಾಮ ಪವಾರ್, ತಾರಾಸಿಂಗ್ ಚವ್ಹಾಣ, ಜನಾರ್ಧನ್ ಮಡಗು, ಶ್ರೀನಿವಾಸ್ ಅತೆಲಿ, ಮಲ್ಲೇಶ್ ರೋಮಪಲ್ಲಿ, ಪ್ರವೀಣ್ ಅತೆಲಿ ವಿಜಯ್ ಮೊಮಲಾ, ಸಂಜೀವ ಅತೇಲಿ, ಶ್ರೀನಿವಾಸ್ ಮಡಿವಾಳ, ಕಂದಾಯ ನಿರಿಕ್ಷಕರಾದ ರವಿಕುಮಾರ್ ಚಿಟ್ಟ ಗ್ರಾಮ ಲೆಕ್ಕಾಧಿಕಾರಿ ಅಮೀರ್ ಬಾಬಾ ಇದ್ದರು.