ಚಿಕ್ಕಬಳ್ಳಾಪುರ : ಅರ್ಥಪೂರ್ಣವಾಗಿ ಬದುಕಿ ಸಾರ್ಥಕವಾದ ಬಾಳನ್ನು ಕಾಣುವ ಸತ್ ಸಂಪ್ರದಾಯ ಇರುವಂತಹ ಸ್ಥಳವನ್ನು ಸ್ವರ್ಗ ಎಂದು ಕರೆಯಲಾಗುತ್ತದೆ. ಸಮಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡರೆ ಆ ಕ್ಷೇತ್ರ ತಪೋಭೂಮಿಯಾಗುತ್ತದೆ.ಅಂತಹ ತಪೋಭೂಮಿಯಾದ ಸತ್ಯ ಸಾಯಿ ಗ್ರಾಮದಲ್ಲಿ ಸದ್ಗುರು ಮಧುಸೂಧನ್ಸಾಯಿ ಮಾರ್ಗದರ್ಶನದಲ್ಲಿ ದೇಶದ ಭವ್ಯ ಸಂಸ್ಕೃತಿ ಜಾಗೃತ ಗೊಂಡಿದೆ ಎಂದು ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ನಡೆಯುತ್ತಿರುವ ಶ್ರೀ ಸತ್ಯಸಾಯಿ ದಸರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಲೋಕ ಕಲ್ಯಾಣಾರ್ಥವಾಗಿ ನಡೆಯುವ ಯಾಗದ ಪೂರ್ಣಾಹುತಿಯನ್ನು ನೆರವೇರಿ ಸಿದ ನಂತರ ಮಾಧ್ಯವನ್ನುದ್ದೇಶಿಸಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಸಂಸ್ಕಾರ ಜಾಗೃತಿಯ ಅರಿವಿಗಾಗಿ ಭಾರತಕ್ಕೆ ಬರುತ್ತಿದ್ದ ರು. ಈಗ ಅದೇ ಕಾರ್ಯ ಮತ್ತೆ ಸತ್ಯಸಾಯಿ ಗ್ರಾಮದಲ್ಲಿ ಜಾಗೃತವಾಗಿದ್ದು ದೇಶದ ಸನಾತನ ಸಂಸ್ಕೃತಿಯ ಪುನರುತ್ಥಾನದ ಮುಂಬೆಳಗನ್ನು ತೋರಿಸುತ್ತಿದೆ. ಯಾವುದೇ ಸತ್ಕಾರ್ಯ ಸತ್ಕರ್ಮಗಳು ಗಟ್ಟಿಯಾಗಿ ನಿಲ್ಲಬೇಕಾದರೆ ಅದಕ್ಕೆ ತ್ಯಾಗ ಮತ್ತು ಸೇವೆಯ ಭದ್ರ ಬುನಾದಿ ಇರಬೇಕು. ಅಂತಹ ಕಾರ್ಯ ಸತ್ಯಸಾಯಿ ಗ್ರಾಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮೂಲಕ ನೆರವೇರುತ್ತಿದೆ.
ಸದ್ಗುರುಗಳು ಈ ತಪೋಭೂಮಿಯಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಸ್ಪರ್ಶಿಸಿ ದೇಶದ ಭವ್ಯ ಪರಂಪರೆಯನ್ನು ಪುನರುದ್ಧಾರ ಮಾಡುತ್ತಿದ್ದಾರೆ. ಮಹಾತ್ಮರು, ಅವತಾರ ಪುರುಷರು ಕಾಲಕಾಲಕ್ಕೆ ಈ ಮಣ್ಣಲ್ಲಿ ಅವತರಿಸಿ ಬಂದ ಕಾರಣ ಭವ್ಯ ಪರಂಪರೆ ಉಳಿದಿದೆ. ಭವಿಷ್ಯದಲ್ಲಿ ಇಡೀ ಪ್ರಪಂಚವೇ ಮತ್ತೊಮ್ಮೆ ಭಾರತದ ಕಡೆಗೆ ತಮ್ಮ ದೃಷ್ಟಿಯನ್ನು ಹರಿಸಲಿದೆ. ಸಾರ್ಥಕ ಬದುಕಿನ ಅರ್ಥಪೂರ್ಣ ಪಾಠ ಸತ್ಯಸಾಯಿ ಗ್ರಾಮದಲ್ಲಿ ಕಾಣಲು ಸಾಧ್ಯ, ಎಂದು ಕನ್ನಡಿಗರೇ ಆದ ಮೇಘಾಲಯದ ರಾಜ್ಯಪಾಲ ಸಿಹೆಚ್ ವಿಜಯಶಂಕರ್ ಅಭಿಪ್ರಾಯಪಟ್ಟರು.
ಮಾತೆ ಕೂಷ್ಮಾಂಡ ದೇವಿ, ಶ್ರೀ ರಾಮ ನಾಮ ತಾರಕ ಹೋಮ, ಆಂಜನೇಯ ಹೋಮ, ಶ್ರೀ ಸಾಯಿ ಗಾಯತ್ರಿ ಹೋಮದಲ್ಲಿ ಭಾಗಿಯಾಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ತನಗೂ ಈ ಸಂಸ್ಥೆಗೂ ನಿರಂತರ ವಾದ ಸಂಪರ್ಕವಿದ್ದು ಇಲ್ಲಿನ ಕಾರ್ಯಕ್ರಮಗಳನ್ನು ಅವಲೋಕಿಸುತ್ತಿದ್ದೇನೆ. ಮನುಷ್ಯ ಜನ್ಮ ದೊರತಿರುವುದೇ ಒಳಿತನ್ನು ಮಾಡುವುದಕ್ಕಾಗಿ. ಎಲ್ಲಿ ಒಳಿತಿದಿಯೋ ಅಲ್ಲಿ ಸತ್ಸಂಗವಿರುತ್ತದೆ. ಸತ್ಸಂಗವು ಮುಂದಿನ ಜನ್ಮಕ್ಕೆ ಕೂಡಿಡುವ ಆಪದ್ಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ಯಜ್ಞಾಧ್ಯಕ್ಷತೆ ಮತ್ತು ಸಾನಿಧ್ಯವನ್ನು ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನ ನೀಡಿ ಸದಾಚಾರಗಳ ರಕ್ಷಣೆ ಮಾಡಿ ಪೋಷಿಸುವುದೇ ಧರ್ಮ. ಪ್ರಜಾ ರಕ್ಷಣೆ, ದುರ್ಬಲರ ಪೋಷಣೆ ಇವುಗಳು ಕೂಡ ಧರ್ಮವೇ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರವರ ಕರ್ತವ್ಯಗಳನ್ನು ಶ್ರದ್ಧೆಯಿಂದ ಸಮಾಜದ ಒಳಿತಿಗಾಗಿ ಮಾಡುವುದೇ ಪರಮ ಶ್ರೇಷ್ಠ ಧರ್ಮ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿ ನೆಮ್ಮದಿಯಿಂದ ಬದುಕು ನಡೆಸುವ ಪರಿಕಲ್ಪನೆ ಸನಾತನ ಸಂಸ್ಕೃತಿಯ ತಿರುಳು. ಆದುದರಿಂದ ಅವರವರ ಕರ್ತವ್ಯಗಳನ್ನು ಅದರದರ ಕ್ರಮಾನುಸಾರ ಮಾಡಬೇಕು. ಸೇವೆಯಾಗಲೀ ತ್ಯಾಗವಾಗಲೀ ಬರಿ ಮಾತಿಗೆ ಸೀಮಿತವಾಗದೆ ಅನುಷ್ಠಾನದಲ್ಲಿ ಬರಬೇಕು. ಎಲ್ಲವನ್ನು ಸಮಾನ ದೃಷ್ಟಿಯಿಂದ ನೋಡುವ ವಿಶಾಲ ಮನೋಭಾವವನ್ನು ಬೆಳೆಸಬೇಕು ಆದರ್ಶಕ್ಕಾಗಿ ಬದುಕ ಬೇಕೇ ಹೊರತು ಅವಕಾಶಕ್ಕಾಗಿ ಬಾಳಬಾರದು, ಎಂದು ತಿಳಿಸಿದರು.
ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ ಎನ್ ನರಸಿಂಹಮೂರ್ತಿಯವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ತಿರುಚಿಯ ಆಧೀನಂ ಮತ್ತು ತಂಬೀರನ್ ಮಹಾಸ್ವಾಮಿಗಳವರು ಹಾಗೂ ಮದ್ರಾಸ್ ಹೈಕೋರ್ಟ್ ಮಧುರೈ ವಿಭಾಗೀಯ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಜಿ ಆರ್ ಸ್ವಾಮಿನಾಥನ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ದುರ್ಗಾಧಕರ ವಿಶಿಷ್ಟ ಶೈಲಿಯ ದುರ್ಗಾಪೂಜೆ ಮತ್ತು ದಸರಾ ಬೊಂಬೆ ಪ್ರದರ್ಶನಗಳನ್ನು ಸದ್ಗುರುಗಳ ಜೊತೆಗೆ ಮುಖ್ಯ ಅತಿಥಿಗಳು ವೀಕ್ಷಿಸಿದರು.