ಬೆಳಗಾವಿ: ನವೆಂಬರ್ 1 ರಂದು ಆಚರಿಸಲಾದ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಯಲು ಜಿಲ್ಲಾಡಳಿತವು ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಒಬ್ಬ ಸಂಸದರಿಗೆ ಬೆಳಗಾವಿ ಜಿಲ್ಲೆಗೆ ಅಕ್ಟೋಬರ್ 31, ಬೆಳಿಗ್ಗೆ 6 ರಿಂದ ನವೆಂಬರ್ 2ರ ಸಂಜೆ 6ರವರೆಗೆ ಪ್ರವೇಶವನ್ನು ನಿಷೇಧಿಸಿದೆ.
ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿರುವ ಎಂಇಎಸ್ ತನ್ನ ಬೇಡಿಕೆಯನ್ನು ಬೆಂಬಲಿಸಿ ಕರ್ನಾಟಕ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸುತ್ತದೆ.
ಇತ್ತೀಚೆಗೆ ಎಂಇಎಸ್‌ನ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಕೊಲ್ಲಾಪುರದಲ್ಲಿ ಭೇಟಿ ಮಾಡಿ ಕರಾಳ ದಿನಾಚರಣೆ ಯಲ್ಲಿ ಭಾಗವಹಿಸಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸಬೇಕು ಮತ್ತು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿ ದ್ದರು.
ಎಂಇಎಸ್ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಸಚಿವರಾದ ಶಂಭುರಾಜೇ ದೇಸಾಯಿ, ಚಂದ್ರಕಾಂತ್ ಪಾಟೀಲ್, ದೀಪಕ್ ಕೇಸರಕರ್ ಮತ್ತು ಸಂಸದ ಧೈರ್ಯಶೀಲ ಮಾನೆ ಅವರನ್ನುಆಹ್ವಾನಿಸಲಾಗಿತ್ತು.
ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೂವರು ಸಚಿವರು ಮತ್ತು ಸಂಸದರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.