ರಾಯಚೂರು : ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ವರ್ಗಾವಣೆ ಮಾಡಿ ನಿಷ್ಪಕ್ಷಪಾತ ತನಿಖೆಗೆ ರಾಜ್ಯ ಸರ್ಕಾರ ಮುಂದಾ ಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುರುಘಾ ಶರಣರು ವೈಜ್ಞಾನಿಕ ಚಿಂತನೆ, ಕ್ರಾಂತಿಕಾರಕ ವ್ಯಕ್ತಿತ್ವ ಹೊಂದಿದವರು. ಆದರೆ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿದ್ದು ಎಲ್ಲರಿಗೂ ದಿಗ್ಭ್ರಮೆಗೊಳಿಸಿದೆ. ಪ್ರಕರಣ ಏನೇ ಇದ್ದರೂ ಸತ್ಯಾಂಶ ಹೊರಬೇಕು. ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕಾನೂನು ಎಲ್ಲರಿಗೂ ಒಂದೇ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿರಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಾಲಕಿಯೂ ಇದ್ದು ಎಸ್.ಸಿ, ಎಸ್.ಟಿ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದರೂ ಪೊಲೀಸರು ಆರೋಪಿ ಶ್ರೀಗಳಿಗೆ ಬಂಧಿಸದೇ 6 ದಿನದ ಬಳಿಕ ಬಂಧಿಸಿದ್ದಾರೆ.
ಇದು ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಆರಂಭದಲ್ಲಿಯೇ ಮುರುಘಾ ಶರಣರ ಪರ ಹೇಳಿಕೆ ನೀಡಿದ್ದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಮುರುಘಾ ಮಠ ಹಾಗೂ ಮುರುಘಾ ಶಿವಮೂರ್ತಿ ಮುರುಘಾ ಶರಣರು ಪ್ರಭಾವಿಯಾಗಿದ್ದು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ, ಪರಿಶಿಷ್ಠರ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಸಂವಿಧಾನದ ಆಶಯಗಳ ವಿರುದ್ಧ ಸರ್ಕಾರ ಆಡಳಿತ ನಡೆಸುತ್ತಿರುವುದನ್ನು ಖಂಡಿಸಿ ಶೀಘ್ರವೇ ಬಹುಜನ ಸಮಾಜ ಪಕ್ಷದಿಂದ ‘ಸಂವಿಧಾನ ಸಂರಕ್ಷಣೆಗೆ ಬಿಎಸ್ಪಿ ಜೋಡೋ ಯಾತ್ರೆ’ ಅಭಿಯಾನ ಆಯೋಜಿಸಲಾಗುವುದು 60 ದಿನಗಳ ಕಾಲ ರಾಜ್ಯಾದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಾಗುವುದು. ರಾಜ್ಯ ಸಭಾ ಮಾಜಿ ಸಚಿವ ಅಶೋಕ ಸಿದ್ಧಾರ್ಥ, ಮುನಿಯಪ್ಪ ಸೇರಿ ಪ್ರಗತಿಪರರು ಭಾಗವಹಿಸ ಲಿದ್ದಾರೆ ಎಂದು ತಿಳಿಸಿದರು.
ಬಿಎಸ್ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ, ಕೆ.ಬಿ ವಾಸು, ಜಗ್ಗೇಶ, ನರಸಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.