Saturday, 26th October 2024

ಕಗ್ಗದಲ್ಲಿದೆ ಮ್ಯಾನೇಜ್‌ಮೆಂಟ್‌ನ ಮಹತ್ತರ ತತ್ವ

ನಗರದಲ್ಲಿ ಡಿವಿಜಿ ನೆನಪು-82 ಕಾರ್ಯಕ್ರಮ
ತುಮಕೂರು: ದಾರ್ಶನಿಕ ಡಾ.ಡಿ.ವಿ.ಗುಂಡಪ್ಪ ವಿರಚಿತ ಮಂಕುತಿಮ್ಮನ ಕಗ್ಗದ ಮುಕ್ತಕಗಳಲ್ಲಿ ಮ್ಯಾನೇಜ್‌ಮೆಂಟ್‌ನ ಗಹನ ತತ್ವ ಅಂತರ್ಗತವಾಗಿದೆ ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಬ್ಯಾಂಕಿಂಗ್ ತರಬೇತಿ ವಿಭಾಗದ ಸಲಹೆಗಾರ ಜೆ.ಎನ್.ಜಗನ್ನಾಥ್ ವಿಶ್ಲೇಷಿಸಿದರು.
ಸರಸ್ ಫೌಂಡೇಷನ್ ವತಿಯಿಂದ ತುಮಕೂರು ನಗರದ ಗಾಯತ್ರಿ ಸಮುದಾಯ ಭವನ ದಲ್ಲಿ ಜೂನ್ 8 ರಂದು ಸಂಜೆ ನಡೆದ ಡಿವಿಜಿ ನೆನಪು ಮಾಲಿಕೆಯ 82 ನೇ ಕಾರ್ಯಕ್ರಮ ದಲ್ಲಿ ಕಗ್ಗ ಮತ್ತು ಮ್ಯಾನೇಜ್‌ಮೆಂಟ್ ವಿಷಯವಾಗಿ ಅವರು ಮಾತನಾಡುತ್ತಿದ್ದರು.
ಕಗ್ಗವನ್ನು ಮನನ ಮಾಡುತ್ತ, ಧ್ಯಾನಿಸುತ್ತ ಹೋದಂತೆ ಅದರಲ್ಲಡಗಿರುವ ಅದ್ಭುತವಾದ ಮ್ಯಾನೇಜ್‌ಮೆಂಟ್ ತತ್ವಗಳ ದರ್ಶನವಾಗುತ್ತ ಹೋಗುತ್ತದೆ. ಇದು ಬದುಕಿಗಷ್ಟೇ ಅಲ್ಲದೆ ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ಕಗ್ಗದ ಕೆಲವೊಂದು ಮುಕ್ತಕಗಳನ್ನು ಉಲ್ಲೇಖಿಸುತ್ತ ಹೇಳಿದರು.
ಡಿವಿಜಿಯವರ ಕಗ್ಗವು ಕೇವಲ ವಿದ್ವಾಂಸರಿಗೆ ಮಾತ್ರ ಮೀಸಲಾಗಿರುವಂಥದ್ದಲ್ಲ. ಅದು ಶ್ರೀಸಾಮಾನ್ಯನಿಗೂ ದಕ್ಕುವಂತಹು ದಾಗಿದೆ. ತಮ್ಮ ಅಪಾರ ಜೀವನಾನುಭವದಿಂದ ಬದುಕಿಗೆ ಸಂಬAಧಿಸಿದ ಎಲ್ಲ ವಿಷಯಗಳನ್ನೂ ಅತ್ಯಂತ ಸೋಪಜ್ಞತೆಯಿಂದ ಕಗ್ಗದಲ್ಲಿ ಅವರು ಪ್ರಸ್ತುತಪಡಿಸಿದ್ದಾರೆ. ಹೀಗಾಗಿ ಕಗ್ಗ ಓದಿದಾಗ ಅದು ನಮ್ಮ ಬದುಕಿಗೆ ಅನ್ವಯವಾಗಿರುವಂತೆ ಭಾಸವಾಗುತ್ತದೆ. ಓದಿದಷ್ಟೂ ಅದು ನಮಗೆ ಹತ್ತಿರವಾಗುವ ಅನುಭವವಾಗುತ್ತದೆ ಎಂದರು.
ಇತ್ತೀಚಿನ ಕೊರೊನಾ ಸಂಕಷ್ಟ ಇಡೀ ಜಗತ್ತನ್ನೇ ಅಲ್ಲೋಲಕಲ್ಲೋಲಗೊಳಿಸಿತು. ಊಹಾತೀತವಾಗಿ ಸಾವುನೋವಿನ ಸಂಕಷ್ಟ ಎದುರಾಯಿತು. ವಾಣಿಜ್ಯ ವಹಿವಾಟುಗಳು ತಲೆಕೆಳಗಾದವು. ಇದೇ ಮೊದಲಿಗೆ ಮನೆಯಿಂದ ಕೆಲಸವೆಂಬ ಹೊಸ ಪದ್ಧತಿ ಜಾರಿ ಗೊಂಡಿತು. ಜಗತ್ತಿನ ಜನಜೀವನ, ವಾಣಿಜ್ಯವಹಿವಾಟುಗಳೆಲ್ಲ ಬದಲಾಗಿಹೋದವು ಎಂಬುದನ್ನು ಜಗನ್ನಾಥ್ ಅವರು ವಿವರಿ ಸುತ್ತ, ಇಂತಹ ವಿಪತ್ತುಗಳ ಬಗ್ಗೆ ಕಗ್ಗದಲ್ಲಿ ಡಿವಿಜಿ ಬಣ್ಣಿಸಿದ್ದಾರೆ.
ಮನುಷ್ಯನ ಶಕ್ತಿಯನ್ನು ಮೀರಿದ ಇನ್ನೊಂದು ಶಕ್ತಿ ಈ ಪ್ರಪಂಚದಲ್ಲಿದ್ದು, ಅದನ್ನು ವಿಧಿಯೆಂದು ಡಿವಿಜಿಯವರು ಕರೆದಿದ್ದಾರೆ. ಅದನ್ನು ತಡೆಯುವ ಶಕ್ತಿ ಮನುಷ್ಯನಿಗಿಲ್ಲ. ಆದರೆ ಹೇಗೆ ವಿವೇಕದಿಂದ ಮುನ್ನಡೆಯಬೇಕು ಎಂಬುದನ್ನು ಅವರು ಪ್ರತಿಪಾದಿಸಿ ದ್ದಾರೆ. ಅವರ ಈ ಎಲ್ಲ ವಿಚಾರಗಳೂ ಬದುಕಿಗಷ್ಟೇ ಅಲ್ಲದೆ ಸಂಸ್ಥೆಯೊ0ದರ ಮ್ಯಾನೇಜ್‌ಮೆಂಟ್‌ಗೂ ಸಹಕಾರಿಯಾಗಿದೆ ಎಂದು ಉದಾಹರಣೆಗಳೊಂದಿಗೆ ಪ್ರಸ್ತುತಪಡಿಸಿದರು.
ಡಿವಿಜಿಯವರ ಜ್ಞಾಪಕಚಿತ್ರಶಾಲೆ ಕೃತಿಯ ವೈಶಿಷ್ಟö್ಯ ಕುರಿತು ಬೆಂಗಳೂರಿನ ಲೇಖಕ ಸುನಿಲ್ ಹಳೆಯೂರು ಅವರು ಮಾತ ನಾಡುತ್ತ, ಸುಮಾರು ಎರಡು ಸಾವಿರ ಪುಟಗಳಿರುವ ಈ ಕೃತಿಯಲ್ಲಿ 189 ವ್ಯಕ್ತಿಗಳ ಚಿತ್ರಣವನ್ನು ಡಿವಿಜಿಯವರು ಮಾಡಿದ್ದಾರೆ.
ಇದರಿಂದ 19 ಮತ್ತು 20 ನೇ ಶತಮಾನದ ಗಣ್ಯರಷ್ಟೇ ಅಲ್ಲದೆ ಜನಸಾಮಾನ್ಯರ ಸದ್ಗುಣಗಳನ್ನು ಹಾಗೂ ಜನಜೀವನದ ಸೊಗಸನ್ನೂ ನಾವಿಂದು ಅರಿಯಲು ಆ ಕೃತಿಯು ಸಹಕಾರಿಯಾಗಿದೆ. ಇತಿಹಾಸದ ಅಧ್ಯಯನ ಮಾಡುವವರು, ವ್ಯಕ್ತಿತ್ವ ನಿರ್ಮಾಣಾಪೇಕ್ಷೆಯುಳ್ಳವರು ಹಾಗೂ ಸಾರ್ವಜನಿಕ ಜೀವನದಲ್ಲಿರುವಂಥವರು ಈ ಅಮೂಲ್ಯ ಕೃತಿಯನ್ನು ಅಧ್ಯಯನ ಮಾಡಲೇಬೇಕು ಎಂದು ಅಭಿಪ್ರಾಯಪಟ್ಟರು.
ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಉಪನ್ಯಾಸ ಮಾಲಿಕೆಗೆ ದೀಪ ಬೆಳಗಿಸುವ ಮೂಲಕ ಪುನರ್ ಚಾಲನೆ ನೀಡಿದ ತುಮಕೂರಿನ ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಅವರು ಮಾತನಾಡಿ, ಡಿವಿಜಿಯವರ ಕಗ್ಗವು ನಮ್ಮಲ್ಲಿರುವ ಅಹಂಕಾರವನ್ನು ತ್ಯಜಿಸಿ ಆತ್ಮವಿಮರ್ಶೆ ಮಾಡಿಕೊಳ್ಳಲು, ನಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಆರ್.ಎಸ್.ಅಯ್ಯರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿನಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ.ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಆರ್.ಬಸವರಾಜಪ್ಪ ವಂದಿಸಿದರು.