Friday, 22nd November 2024

Minister G Parameshwar: 2025ಕ್ಕೆ ಜಿಲ್ಲೆಗೆ 5.470 ಟಿಎಂಸಿ ಎತ್ತಿನಹೊಳೆ ನೀರು: ಸಚಿವ ಪರಮೇಶ್ವರ್ 

ತುಮಕೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.8ರಂದು ಚಾಲನೆ ನೀಡಲಾಗುತ್ತಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೀರಿನ ಯಂತ್ರಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ಸ್ಪೋಟ ಗೊಂಡಿದ್ದವು. ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಅವರು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದ ಯಶಶ್ವಿಯಾಗಿವೆ. ಸೆ.6ರಂದು ಚಾಲನೆ ನೀಡಲಾಗುತ್ತಿದೆ. ಈ ನೀರನ್ನು ವಾಣಿವಿಲಾಸ ಸಾಗರ ಅಣೆಕಟ್ಟೆಗೆ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಆ ಭಾಗಕ್ಕೆ ಉಪಯೋಗವಾಗಲಿದೆ. ಮುಂದಿನ ವರ್ಷ ಅರಸಿಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಳ್ಳಲಿದ್ದು ತುಮಕೂರಿಗೆ ನೀರು ಬರಲಿದೆ ಎಂದು ತಿಳಿಸಿದರು. 

ಎತ್ತಿನಹೊಳೆ ಯೋಜನೆಯ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ಹಂಚಿಕೆ ಮಾಡಲಾಗಿದೆ. 2.294 ಟಿಎಂಸಿ ಕುಡಿಯುವ ನೀರಿಗೆ, 3.446 ಸಣ್ಣನೀರಾವರಿ 113 ಕೆರೆಗಳ ಭರ್ತಿಗೆ ಅವಕಾಶವಿದೆ. ಒಟ್ಟು 3117 (76 ಗುಂಟೆ) ಎಕರೆ ಜಾಗದಲ್ಲಿ 2022 ಎಕರೆ ಭೂಮಿಗೆ ಹಣ ಮಂಜೂರಾಗಿ, ಭೂಸ್ವಾಧೀನವಾಗಿದೆ. 80ರಷ್ಟು ಭೂಸ್ವಾಧೀನ ಗೊಂಡಿದೆ. ರೂ 1200 ಕೋಟಿ ಬಿಡುಗಡೆಯಾಗಿದೆ. 2025ಕ್ಕೆ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ನೀರು ಹರಿಯಲಿದೆ‌. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 0.20 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಬೇಕಾದ ಹಣಕಾಸು, ತಾಂತ್ರಿಕತೆಯನ್ನು ಅಧ್ಯಯನ ನಡೆಸಿ,  12,912.36 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿ, 17-2-2014ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರು. ಯೋಜನೆಯ ಇವತ್ತಿನ ಮೊತ್ತ ₹ 23,251 ಕೋಟಿ ತಲುಪಿದೆ. ಈ ಯೋಜನೆಯು ಮುಂಬರುವ ಮಾರ್ಚ್ 2027ಕ್ಕೆ ಸಂಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 150 ಕಿ.ಮೀ.ಕೆನಾಲ್

ಜಿಲ್ಲೆಯಲ್ಲಿ ಮುಖ್ಯ ಕೆನಾಲ್ 150 ಕಿ.ಮೀ ಇದೆ. ಇದರಲ್ಲಿ 102 ಕಿ.ಮೀ ಕೆನಾಲ್ ಕಾಮಗಾರಿ ಪೂರ್ಣಗೊಂಡಿದೆ. 121 ಕಿ.ಮೀ ಫೀಡರ್ ಕೆನಾಲ್‌ನಲ್ಲಿ 106 ಕಿ.ಮೀ. ಪೂರ್ಣಗೊಂಡಿದೆ. ಜುಲೈ 2025ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಸುಮಾರು 63 ಎಕರೆ ಅರಣ್ಯ ಭೂಮಿ ಈ ಯೋಜನೆಯಲ್ಲಿ ಬರುತ್ತದೆ ಎಂದರು.

ಶೇ.64ರಷ್ಟು ಕೆನಾಲ್ ಕಾಮಗಾರಿ ಪೂರ್ಣ

ಎತ್ತಿನಹೊಳೆ ಯೋಜನೆಯ ಕೆನಾಲ್ ದಾರಿ ತಿಪಟೂರು 43 ಕಿ.ಮೀ, ಚಿಕ್ಕನಾಯಕನಹಳ್ಳಿ 12 ಕಿ.ಮೀ, ತುರುವೆಕೆರೆ 1 ಕಿ.ಮೀ, ಗುಬ್ಬಿ 41 ಕಿ.ಮೀ, ತುಮಕೂರು ಗ್ರಾ 31, ಕೊರಟಗೆರೆ 19, ಮಧುಗಿರಿ (ಫೀಡರ್ ಕೆನಾಲ್) 40 ಕಿ.ಮೀ, ಪಾವಘಡ 42 ಕಿ.ಮೀ. ಕೆನಾಲ್ ಹಾದುಹೋಗಲಿದೆ. ಜಿಲ್ಲೆಯಲ್ಲಿ ಶೇ. 64ರಷ್ಟು ಮುಖ್ಯ ಕೆನಾಲ್ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಸಿ.ಟಿ.ರವಿಗೆ ತಿರುಗೇಟು:-

ನಾವು ಎತ್ತಿನಹೊಳೆ ಯೋಜನೆ ಪೂರ್ಣಗೊಂಡಿದೆ ಎಂದು ಎಲ್ಲಿಯೂ ಹೇಳಿಲ್ಲ. ಯೋಜನೆಯ 1ನೇ ಹಂತ ಕಾಮಗಾರಿ ಪೂರ್ಣಗೊಂಡಿದೆ. ಸಿ.ಟಿ.ರವಿ ಡಬಲ್ ಗ್ಯಾಜ್ಯುಯೇಟ್ ಪದವೀಧರರು. ಅವರನ್ನು ತಪ್ಪಿಸಿ ಮಾಡ ಲಾಗುವುದಿಲ್ಲ ಸಿ.ಟಿ.ರವಿ ಅವರಿಗೆ ತಿರುಗೇಟು ನೀಡಿದರು.