ಕೊಪ್ಪಳ: ಬಿಜೆಪಿ ಅವಧಿಯಲ್ಲೂ ವಕ್ಫ ಮಂಡಳಿ ರೈತರಿಗೆ ನೋಟೀಸ್ ನೀಡಿದೆ. ಈ ಬಗ್ಗೆ ದಾಖಲೆ ಸಹಿತಿ ಮಾಹಿತಿ ನೀಡುತ್ತೇನೆ. ಆಗ ಬಿಜೆಪಿಗರು ಕಣ್ಣು ಮುಚ್ಚಿ ಕುಳಿತಿದ್ದರಾ? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2021ರಲ್ಲಿ 1589 ಆಸ್ತಿ ಸೇರಿಬ ಒಟ್ಟು 3948 ಎಕರೆ ಭೂಮಿಗೆ ವಕ್ಫ್ ಮಂಡಳಿ ನೋಟೀಸ್ ನೀಡಿದೆ. ಆಗ ಬಿಜೆಪಿ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ತಂಗಡಗಿ, ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಈ ವಕ್ಫ ಮಂಡಳಿ ನೋಟೀಸ್ ವಿಚಾರ ಮುನ್ನೆಲೆಗೆ ತಂದಿದೆ. ಬಿಜೆಪಿಗರ ಈ ಕುತಂತ್ರಕ್ಕೆ ಕಾಂಗ್ರೆಸ್ ಮತ್ತು ಸರಕಾರ ಜಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.
ವಕ್ಫ ಮಂಡಳಿ ಕೃಷಿ ಭೂಮಿಗೆ ನೋಟೀಸ್ ನೀಡಿದ್ದು ಹಾಗೂ ಪಹಣಿಯ ಕಲಂ ನಂ. 11ರಲ್ಲಿ ವಕ್ಫ ಆಸ್ತಿ ಎಂದು ದಾಖಲಾದ ಬಗ್ಗೆ ರೈತರು ಆತಂಕಪಡುವುದು ಬೇಡ. ಸಿಎಂ ಜೊತೆ ಈಗಾಗಲೇ ನಾವು ಮಾತನಾಡಿದ್ದೇವೆ. ಜಿಲ್ಲಾ ವಾರು ಮಾಹಿತಿ ತರಿಸಿಕೊಂಡು ಸಮಸ್ಯೆ ಪರಿಹರಿಸುತ್ತೇವೆ. ರೈತರಿಗೆ ತೊಂದರೆ ಕೊಡುವುದು ಬೇಡ ಸಿಎಂ ಸೂಚನೆ ನೀಡಿದ್ದೇವೆ. ರೈತರು ಆತಂಕ ಪಡುವುದು ಬೇಡ. ರೈತರು ನೆಮ್ಮದಿಯಿಂದ ಇದ್ದಾರೆ. ಉಪ ಚುನಾವಣೆ ಹಿನ್ನೆಲೆ ಬಿಜೆಪಿಗರಿಗೆ ಹೊಟ್ಟೆಕಿಚ್ಚು ಆರಂಭವಾಗಿದೆ. ವಿರೋಧ ಪಕ್ಷಗಳ ಮಾತು ಕೇಳಿ ರೈತರು ಆತಂಕ ಪಡಬಾರದು. ನಮ್ಮ ಸರಕಾರ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಸರಕಾರ ರೈತರ ಜೊತೆ ಇರುತ್ತದೆ. ಬಿಜೆಪಿಗರು ಅಧಿವೇಶದಲ್ಲಿ ಬಂದು ಪ್ರಶ್ನಿಸಲಿ,ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದರು.
ಗ್ಯಾರಂಟಿ ಯೋಜನೆ ಪಂಚರ್ ಆಗಿವೆ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿ.ಟಿ.ರವಿ ಪಂಚರ್ ಆಗಿದ್ದಾರೆ. ಬಿಜೆಪಿ ಪಂಚರ್ ಆಗಿದೆ. ಅದಕ್ಕೆ ಅವರು ಹೀಗೆ ಮಾತನಾಡುತ್ತಿದ್ದಾರೆ. ಯಾವುದೇ ಗ್ಯಾರಂಟಿ ಬಂದ್ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಐದೂ ಗ್ಯಾರಂಟಿ ಯೋಜನೆ ಈ ಸರಕಾರ ಇರುವ ವರಗೆ ಮುಂದುವರೆಯಲಿವೆ ಎಂದು ಭರವಸೆ ನೀಡಿದರು.
ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರಕಾರ ತಿರಸ್ಕರಿಸಿತ್ತು. ಅಂಕಿ ಸಂಖ್ಯೆ ಆಧಾರದ ಮೇಲೆ ರಾಜ್ಯ ಸರ್ಕಾರ ನಿರ್ಧಾರ ಮಾಡಲಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ನಾನು ಅಂಕಿ ಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡಿ ಹಿಂದೆಯೇ ಹೇಳಿದ್ದೇನೆ. ಈಗಲೂ ನನ್ನದು ಅದೇ ಮಾತು. ಒಳ ಮೀಸಲಾತಿ ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗಿದೆ. ಸದಾಶಿವ ಆಯೋಗದ ಅಂಕಿ- ಸಂಖ್ಯೆಗಳು ಸರಿ ಇಲ್ಲ. ಈ ಹಿನ್ನೆಲೆ ಮತ್ತೇ ಆಯೋಗ ರಚನೆ ಮಾಡಿದ್ದೇವೆ. ಆಯೋಗದ ವರದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
*
ವಿಧಾನಸೌಧದ ಮುಂದೆ ನಾಡ ದೇವತೆ ಭುವನೇಶ್ವರಿ ಮೂರ್ತಿಯನ್ನು ಮುಂದಿನ ತಿಂಗಳು ಪ್ರತಿಷ್ಠಾಪನೆ ಮಾಡುತ್ತೇವೆ. ಅಗತ್ಯ ಸಂಪನ್ಮೂಲ ಹೊಂದಿರುವ ಸಂಸ್ಥೆಗೆ ಮೂರ್ತಿ ಪ್ರತಿಷ್ಠಾಪನೆಯ ಜವಾಬ್ದಾರಿ ನೀಡಿದ್ದೇವೆ. ಕರ್ನಾಟಕ ಮೂಲದ ಕಂಪನಿಗೆ ನೀಡಬೇಕು ಎಂಬ ವಾದ ಸರಿಯಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ರ ಮೂರ್ತಿ ಯನ್ನು ಚೀನಾ ದೇಶದಲ್ಲಿ ತಯಾರಿಸಲಾಗಿದೆ ಎಂದರೆ ಹೇಗೆ?
- ಶಿವರಾಜ ತಂಗಡಗಿ, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇದನ್ನೂ ಓದಿ: Koppal Breaking: ಒಂದೇ ಪ್ರಕರಣದಲ್ಲಿ 101 ಮಂದಿಗೆ ಶಿಕ್ಷೆ; ಒಬ್ಬ ಅಪರಾಧಿ ಸಾವು