ತುಮಕೂರು: ಮುಖ್ಯಮಂತ್ರಿ ನನಗೆ ನೀಡಿರುವ ಖಾತೆಯಲ್ಲಿ ಬಡವರ ಸೇವೆ ಮಾಡಲು ಅವಕಾಶ ಇದೆ. ಹಾಗಾಗಿ ಈ ಖಾತೆ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ನೂತನ ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿ, ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಗಳನ್ನು ಘೋಷಿಸಿತ್ತು. ಈಗಾಗಲೇ ಮೊದಲ ಸಚಿವ ಸಂಪುಟದಲ್ಲೇ ಈ ಗ್ಯಾರೆಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಆದಷ್ಟು ಬೇಗ ಮುಖ್ಯಮಂತ್ರಿಗಳು ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾವೆ ಎಂದರು.
ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಮಾಧ್ಯಮದವರು ಏಕೆ ಇಷ್ಟು ಆತುರಪಡು ತ್ತಿದ್ದೀರಾ, ಸರ್ಕಾರ ಅಸ್ತಿತ್ವಕ್ಕೆ ಬಂದು ಇನ್ನು 8-10 ದಿನಗಳಾಗಿವೆ ಅಷ್ಟೆ. ದಯವಿಟ್ಟು ತಾಳ್ಮೆಯಿಂದ ಇರಿ, ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದರು.
ಸಿದ್ದಗಂಗಾ ಮಠದಲ್ಲಿ 10 ಸಾವಿರ ಮಕ್ಕಳಿಗೆ ಮಾತ್ರ ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಹಾಗಾಗಿ ಶ್ರೀಗಳು ಕಟ್ಟಡ ವ್ಯವಸ್ಥೆ ಇಲ್ಲದ ಕಾರಣ ಈ ಬಾರಿ 10 ಸಾವಿರ ಮಕ್ಕಳಿಂದ ಅರ್ಜಿ ಸ್ವೀಕರಿಸಲು ಮಾತ್ರ ತೀರ್ಮಾನ ಮಾಡಿದ್ದಾರೆ.
ಹಾಗಾಗಿ ಈ ಬಾರಿ ಮಠಕ್ಕೆ ಮಕ್ಕಳನ್ನು ದಾಖಲಿಸಲು ಬೇಡಿಕೆ ಜಾಸ್ತಿಯಾಗಿದೆ. ನಾನು ಸಹ ಶ್ರೀಗಳಿಗೆ ಮುಂದಿನ ವರ್ಷ ಮತ್ತಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.
ಸಿದ್ದಗಂಗಾ ಮಠದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ಸರಕಾರ 10 ಕೋಟಿ ರು. ಹಣ ಬಿಡುಗಡೆ ಮಾಡಿತ್ತು. ಈ ಆದೇಶ ವನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆಯಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಜತೆ ಶ್ರೀಗಳು ಚರ್ಚಿಸಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅಗತ್ಯ ಕಟ್ಟಡ ವ್ಯವಸ್ಥೆಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್ ಕರಂಗಿ, ಎಇಇ ಮಹಲಿಂಗಪ್ಪ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಲೀಮ್ ಮತ್ತಿತರರು ಉಪಸ್ಥಿತರಿದ್ದರು.