Friday, 22nd November 2024

MLA Pradeep Eshwar: ನಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿದರೆ ತಕ್ಕಶಾಸ್ತಿಯ ಎಚ್ಚರಿಕೆ ರವಾನೆ

ಶಾಸಕ ಪ್ರದೀಪ್ ಈಶ್ವರ್ ಪರ ಎದ್ದುನಿಂತ ಕಾಂಗ್ರೆಸ್ ಮತ್ತು ಅಹಿಂದ ಮುಖಂಡರು

ಚಿಕ್ಕಬಳ್ಳಾಪುರ : ಸಂಸದರು ಹಾಗೂ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯರು ನಮ್ಮ ಪಕ್ಷದ ಮುಖಂಡರು ಹಾಗೂ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅಸಂಸದೀಯ ಪದಬಳಕೆ ಮಾಡುವುದಾಗಲಿ, ವೈಯಕ್ತಿಕ ವಿಚಾರಗಳನ್ನು ಕೆದಕಿ ಅವಹೇಳನ ಮಾಡುವುದಾಗಲಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಹುಷಾರ್ ಎಂಬ ಎಚ್ಚರಿಕೆಯ ಸಂದೇಶವನ್ನು ಕಾಂಗ್ರೆಸ್ ಮುಖಂಡರು ರವಾನಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮಾತನಾಡಿದರು.

ಸಂಸದರಂತೆ ನಡೆದುಕೊಳ್ಳಿ

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ ನಗರಸಭೆ ಚುನಾವಣೆಯ ದಿನ ಸಂಸದರ ನಡೆ, ನಡೆದುಕೊಂಡ ರೀತಿ, ಶಾಸಕರ ಬಗ್ಗೆ ಮಾಧ್ಯಮದವರ ಮುಂದೆ ನೀಡಿದ ಹೇಳಿಕೆ ಯಾವುದೂ ಪ್ರಬುದ್ಧ ರಾಜಕಾರಣಿ ಯ ಮಾತಿನಂತೆ ಇರಲಿಲ್ಲ.ರಾಷ್ಟೀಯ ಪಕ್ಷದ ಅಧ್ಯಕ್ಷನಾದ ನನ್ನನ್ನು ಏಯ್ ಯಾಕಿಲ್ಲಿದ್ದೀಯಾ? ಎನ್ನುವಷ್ಟರ ಮಟ್ಟಿಗೆ ಅವರ ದುರ್ವತನೆಯಿದ್ದು ಇದಕ್ಕೆ ನಮ್ಮ ಖಂಡನೆಯಿದೆ.ಚುನಾವಣಾಧಿಕಾರಿ ಅನುಮತಿ ಪಡೆದೇ 1 ಗಂಟೆ ವರೆಗೂ ನಮ್ಮ ಸದಸ್ಯರಿಗೆ ವಿಫ್ ಜಾರಿ ಮಾಡಲು ನಿಂತಿದ್ದು ತಪ್ಪೇ? ಎಂದ ಅವರು ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂಬುದು ಗೊತ್ತಿದ್ದರೂ ದರ್ಫ ದೌರ್ಜನ್ಯ ಸಹಿತ ದುರ್ವರ್ತನೆ ತೋರಿದ್ದು ಸಂಸದನ ಸ್ಥಾನಕ್ಕೆ ತಕ್ಕುದ್ದಲ್ಲ ಎಂದರು.

ನಿಮಗೊಂದು ನ್ಯಾಯ ನಮಗೆ ಬೇರೆಯೇ?

ನೀವು ಸಚಿವರಾಗಿದ್ದಾಗ ವೈ.ಎ.ನಾರಾಯಣಸ್ವಾಮಿ ಇಲ್ಲಿ ಬಂದು ಮತ ಹಾಕಿದ್ದು ಸರಿ.ನಮ್ಮ ಪಕ್ಷದ ಎಂಎಲ್‌ಸಿ ಗಳು ಮತ ಹಾಕಿದರೆ ತಪ್ಪೇ? ಎಂದ ಅವರು ಶಾಸಕರು ರಾಜಕಾರಣಕ್ಕೆ ಹೊಸಬರು ಇರಬಹುದು. ಹಾಗಂತ ಅವಹೇಳನ ತರವಲ್ಲ. 2023ರಿಂದೀಚೆಗೆ ಕ್ಷೇತ್ರದಲ್ಲಿ ವಿನಾಕಾರಣ ಯಾವುದಾದರೂ ಕೇಸು ಹಾಕಿದ್ದರೆ ಹೇಳಿ, ನಿಮ್ಮ 10 ವರ್ಷದ ಅಧಿಕಾರದಲ್ಲಿ ಪ್ರಶ್ನಿಸಿದರೆ ಸಾಕು ರೌಡಿ ಶೀಟರ್ ಮಾಡುವುದು. ಅಟ್ರಾಸಿಟಿ ಕೇಸು ಹಾಕಿಸಿದ್ದು ಮರೆ ತಂತಿದೆ. ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಬನ್ನಿ, ಅದನ್ನು ಬಿಟ್ಟು ಹೀನಾಯವಾಗಿ ಮಾತನಾಡುವುದು, ವೈಯಕ್ತಿಕ ನಿಂದನೆ ಸಹಿಸೊಲ್ಲ. ಸುಖಾಸುಮ್ಮನೆ ರೊಚ್ಚಿಗೆಬ್ಬಿಸಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ನಗರಸಭಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ ನಮ್ಮ ಶಾಸಕ ಪ್ರದೀಪ್ ಈಶ್ವರ್ ಅವರು ಹಣ ಕೊಟ್ಟು, ಹೆದರಿಸಿ ಬೆದರಿಸಿ ಅಕ್ರಮದಲ್ಲಿ ಚುನಾವಣೆ ನಡೆಸುವುದು ಬೇಡ ಎಂದು ಹೇಳಿ ಸುಮ್ಮನಿದ್ದರು. ನಾವೇ ಅವರಿಗೆ ಒತ್ತಡ ಹಾಕಿ ಏನಾದರಾಗಲಿ ಚುನಾವಣೆ ಎದುರಿಸೋಣ ಎಂದು ಮನವೊಲಿಸಿ ಕರೆ ತಂದೆವು. ಈ ಸೋಲಿಗೂ ಶಾಸಕ ರಿಗೂ ಸಂಬಂಧ ಕಲ್ಪಿಸುವುದು ಬೇಡ.ನಮ್ಮ ಸ್ನೇಹಿತರೇ ನಮ್ಮ ಬೆನ್ನಿಗೆ ಚೂರಿ ಹಾಕಿದ ಕಾರಣ ಸೋಲನ್ನು ಅನುಭವಿಸಬೇಕಾಯಿತು. ನಾವು ಎಲ್ಲಿಯೂ ತಲೆಮರೆಸಿಕೊಂಡಿಲ್ಲ.

ಶಾಸಕರು ಕುತಂತ್ರ ರಾಜಕಾರಣಿ ಅಲ್ಲ

ಆದರೆ ಸಂಸದ ಸುಧಾಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಧ್ಯಮಗಳಿಗೆ ಸುಳ್ಳು ಸುದ್ದಿ ಹಬ್ಬಿಸಿ ನಮ್ಮ ಕಾಂಗ್ರೆಸ್ ಸದಸ್ಯರಿಗೆ ಅನಗತ್ಯ ಒತ್ತಡ ಹಾಕಿ, ಆಮಿಷಗಳನ್ನು ಒಡ್ಡಿ ಮತ ಹಾಕಿಸಿಕೊಂಡಿದ್ದಾರೆ. ಚುನಾವಣೆಗೂ ಮುನ್ನ ಪ್ರವಾಸದ ನೆಪದಲ್ಲಿ ಕೌನ್ಸಿಲರ್‌ಗಳನ್ನು ರೆಸಾರ್ಟ್ಗಳಲ್ಲಿ ಇಟ್ಟುಕೊಂಡು ಅವರಿದ್ದ ರೂಮುಗಳ ಮುಂದೆ ಬೌನ್ಸರ್‌ಗಳನ್ನು ಕಾವಲಿಟ್ಟು ಹೆದರಿಸಿ ಬೆದರಿಸಿ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಸುಧಾಕರ್ ಅಧ್ಯಕ್ಷ ಸ್ಥಾನಕ್ಕೆ ಒಬ್ಬರನ್ನು ತೋರಿಸಿ, ಕೊನೇ ಗಳಿಗೆಯಲ್ಲಿ ಸ್ವಜಾತಿ ಪ್ರೇಮದಿಂದ ಅವರು ಗಜೇಂದ್ರ ಅಧ್ಯಕ್ಷರಾಗುವಂತೆ ಮಾಡಿದ್ದಾರೆ. ಯಾರೂ ಕೂಡ ಮನಸಾಕ್ಷಿಯಾಗಿ ಮತ ಹಾಕಿಲ್ಲ. ಸಾಮಾಜಿಕ ನ್ಯಾಯವನ್ನು ಇವರು ಮಾಡಿಲ್ಲ. ನಮ್ಮ ಶಾಸಕರು ನಿಮ್ಮ ನಾಯಕರು ಮಾಡುವ ಹಾಗೆ ಕುತಂತ್ರ ರಾಜಕಾರಣ ಕಲಿತಿದ್ದರೆ, ನೀವ್ಯಾರೂ ಕೂಡ ನಗರದಲ್ಲಿ ಉಳಿಯಲು ಕೂಡ ಆಗುತ್ತಿರಲಿಲ್ಲ. ಎಚ್ಚರಿಕೆ ಕೊಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ನೀಡಿ ಅದಕ್ಕೆ ನಮ್ಮ ಸಹಕಾರ ಇದೆ ಎಂದು ಆಕ್ರೋಶದಿಂದ ನುಡಿದರು.

ಮಿಲ್ಟನ್ ವೆಂಕಟೇಶ್ ಮಾತನಾಡಿ, ಗಜೇಂದ್ರ ಅವರೇ, ನಮ್ಮ ಶಾಸಕರ ಬಳಿ ಜೆಡಿಎಸ್ ಸದಸ್ಯೆ ವೀಣಾರಾಮು ಅವರನ್ನು ಕರದುಕೊಂಡು ಹೋಗಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರೆ ನಿಮಗೆ ಬೆಂಬಲ ನೀಡುವೆ ಎಂದು ಕೇಳಿದ್ದು ಸುಳ್ಳಾ ಹೇಳಿ ನೋಡೋಣ ಎಂದರು. ನಮ್ಮ ಅಧ್ಯಕ್ಷರಿಗೆ ಎಚ್ಚರಿಕೆ ನೀಡುವ ದಾಟಿಯಲ್ಲಿ ಮಾತನಾಡಿ ದ್ದು ಸಂಸದರೇ ವಿನಃ ನಮ್ಮ ನಾಯಕರಲ್ಲ.ನಮಗೂ ಎಚ್ಚರಿಕೆ ನೀಡುವುದು, ನಿಮ್ಮ ನಾಯಕರ ಮೇಲೆ ನಿಮಗೆ ಅಭಿಮಾನ ಇರುವಂತೆ ನಮ್ಮ ನಾಯಕರ ಮೇಲೂ ನಮಗೆ ಇರುತ್ತದೆ. ಇಂತಹ ಗೊಡ್ಡು ಬೆದರಿಕೆ ಬಿಟ್ಟು ಅಭಿವೃದ್ಧಿಗೆ ಗಮನ ನೀಡಿ ಎಂದರು.

ಹಿರಿಯ ಸದಸ್ಯ ರಫೀಕ ಮಾತನಾಡಿ ಡಾ.ಕೆ.ಸುಧಾಕರ್ ನೀವು 2013ರಲ್ಲಿ ಹೇಗಿದ್ದಿರಿ ಎಂಬುದನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ,ಕಾಂಗ್ರೆಸ್ ಪಕ್ಷದಿಂದ ಗೆದ್ದವರು ಅದನ್ನು ಮರೆಯಬೇಡಿ? ನಮ್ಮ ಶಾಸಕರು ರಾಜಕಾರಣಕ್ಕೆ ಹೊಸಬರು, 2023ರಲ್ಲಿ ನಿಮ್ಮನ್ನು ಆಗ ತಿದ್ದಿ ತೀಡಿದಂತೆ ಇವರನ್ನೂ ಕೂಡ ತಯಾರು ಮಾಡುತ್ತೇವೆ. ಹಿರಿಯ ಜನಪ್ರತಿನಿಧಿ ಕಿರಿಯರಿಗೆ ಹೇಗೆ ಗೌರವ ನೀಡಿ ನಡೆಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ನಡೆದರೆ ನಿಮಗೂ ಕ್ಷೇಮ ನಮಗೂ ಕ್ಷೇಮ ಎಂದರು.

ನೀವು ಸಂಸದರಾಗಿ ಕೇಂದ್ರದಿAದ ಏನೇನು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೋ ಅದನ್ನು ಮಾಡಿ.ಗೊತ್ತಿಲ್ಲದಿದ್ದರೆ ಏನೇನು ತರಬಹುದು ನನ್ನನ್ನು ಕೇಳಿ ಹೇಳಿಕೊಡುತ್ತೇನೆ. ಇದನ್ನು ಬಿಟ್ಟು ನಮ್ಮ  ಶಾಸಕರ ಬಗ್ಗೆ ಹಗುರವಾಗಿ ಮಾಡುವುದು ತರವಲ್ಲ. ನಿಮ್ಮ ಜತೆಗೆ ಗುರುತಿಸಿಕೊಂಡಿರುವ ಎಲ್ಲಾ ನಗರಸಭೆ ಸದಸ್ಯರು ಮಾಜಿ ಅಧ್ಯಕ್ಷರು ನಗರಸಭೆ ಆಸ್ತಿಯನ್ನು ನುಂಗಿದವರೇ ಆಗಿದ್ದಾರೆ. ಇದರ ವಿರುದ್ದ ನಾವು ಹೋರಾಟ ಮುಂದು ವರೆಸುತ್ತೇವೆ. ಸುಪ್ರೀಂ ಕೋರ್ಟ್ಗೆ ಹೋದರೂ ಚಿಂತೆಯಿಲ್ಲ. ಅಡ್ಡಮತದಾನ ಹಾಕಿದವರನ್ನು 20 ದಿನಗಳ ಒಳಗೆ ಅನರ್ಹಗೊಳಿಸಲಾಗುವುದು. ಸಂಸದರೆ ನಿಮ್ಮ ಕೆಲಸ ನೀವು ಮಾಡಿ ಶಾಸಕರ ಕೆಲಸ ಶಾಸಕರು ಮಾಡುತ್ತಾರೆ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಎಂದೂ ಕೂಡ ಕೋಮುಗಲಭೆ ಆಗಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಕೂಡ ಭಾವೈಕ್ಯತೆ ಯಿಂದ ನಡೆದುಕೊಂಡು ಹೋಗಿದ್ದಾರೆ. ಸಂಸದರಾದ ಮೇಲೆ ಮುಸ್ಲಿಂ ಆಚರಣೆಗಳ ಮೇಲೆ ದಾಳಿ ಶುರುವಿಟ್ಟು ಕೊಂಡಿದ್ದಾರೆ. ಗಣಪತಿ ಹಬ್ಬಕ್ಕೆ ನಿರ್ಬಂಧ ಮುಸ್ಲಿಂ ಹಬ್ಬಗಳಿಗೆ ವಿನಾಯಿತಿ ನೀಡುತ್ತಾರೆ ಎಂದು ಟೀಕಿಸುತ್ತಿದ್ದಾರೆ. ಇದು ತರವಲ್ಲ ಎಂದರು.

ವೇದಿಕೆಯಲ್ಲಿ ನಂದಿ ಆಂಜಿನಪ್ಪ,ಕೆ.ಎ0.ಮುನೇಗೌಡ, ಕೌನ್ಸಿಲರ್ ಅಂಬರೀಶ್, ಅಡ್ಡಗಲ್ ಶ್ರೀಧರ್, ಮಾಜಿ ಶಾಸಕಿ ಅನುಸೂಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರೆಸ್ ಸೂರಿ ಕೌನ್ಸಿಲರ್, ಚಂದ್ರು ಮತಿತರರು ಇದ್ದರು.