Saturday, 23rd November 2024

MLA Pradeep Eshwar: ತಾಲೂಕು ಆಡಳಿತವನ್ನು ಹಳ್ಳಿಗೆ ಕರೆದೊಯ್ದ ಶಾಸಕ ಪ್ರದೀಪ್ ಈಶ್ವರ್.!

ಅಶ್ವತ್ಥಕಟ್ಟೆ ಮೇಲೆ ಕುಳಿತು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ

ಹಳ್ಳಿ ಹಳ್ಳಿಗೂ ಅಧಿಕಾರಿಗಳ ಜೊತೆ ಶಾಸಕ ಪ್ರದೀಪ್ ಈಶ್ವರ್ ಭೇಟಿ.!”ನಮ್ಮ ಊರಿಗೆ ನಮ್ಮ ಶಾಸಕರು” ಹೆಸರಿನಲ್ಲಿ ಕಾರ್ಯಕ್ರಮ.!

ಚಿಕ್ಕಬಳ್ಳಾಪುರ : ರಾಜಕಾರಣದಲ್ಲಿ ಈಗಷ್ಟೇ ಅರಳುತ್ತಿರುವ ಯುವನಾಯಕ ಪ್ರದೀಪ್ ಈಶ್ವರ್ ಹಲವು ವಿಚಾರ ಗಳಲ್ಲಿ ಸಮಕಾಲೀನರಿಗಿಂತ ಭಿನ್ನವಾಗಿ, ಒಮ್ಮೊಮ್ಮೆ ವಿಲಕ್ಷಣವಾಗಿ ಕಾಣುವ ವ್ಯಕ್ತಿತ್ವದವರು.

ತಾವು ಶಾಸಕ ರಾದ ಕೂಡಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಮಸ್ತೆ ಚಿಕ್ಕಬಳ್ಳಾಪುರದ ಎಂಬ ಕಾರ್ಯ ಕ್ರಮ ಹಮ್ಮಿಕೊಂಡು ಬೆಳಿಗ್ಗೆ ೬ ಗಂಟೆಗೆ ಮತದಾರರ ಮನೆಬಾಗಿಲು ಬಡಿದು, ಅವರ ಸಮಸ್ಯೆ  ಆಲಿಸಿ, ಕೈಲಾದ ಸಹಾಯ ಮಾಡಿ ಹೆಸರಾದವರು.

ಇದೇ ಮಾದರಿಯಲ್ಲಿ ಬುಧವಾರ ನಮ್ಮ ಊರಿಗೆ ನಮ್ಮ ಶಾಸಕ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಈಡೀ ತಾಲೂಕು ಆಡಳಿತವನ್ನು ಗ್ರಾಮಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ ಸೈ ಎನಿಸಿಕೊಂಡಿದ್ದಾರೆ.

ತಾಲೂಕು ಆಡಳಿತವನ್ನು ಗ್ರಾಮದ ಅಶ್ವತ್ಥಕಟ್ಟೆಗೆ ಕರೆತಂದು ಗ್ರಾಮಸ್ಥರ ಸಮ್ಮುಖದಲ್ಲಿ ಅಲ್ಲಿನ ಜನ ಎದುರಿಸು ರುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಾಣಿಸುವ ಕೆಲಸ ಮಾಡುವ ಮೂಲಕ ಜನತೆಯಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದ್ದಾರೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಘಟ್ಟಿಗಾನಹಳ್ಳಿ, ಸುಬ್ಬರಾಯನಹಳ್ಳಿ, ಕೊರ್ಲ ಹಳ್ಳಿ, ಗೌಚೇನಹಳ್ಳಿ, ಮಧುರೇನಹಳ್ಳಿ, ಕಂಗಾನಹಳ್ಳಿ, ನಶಿಕುಂಟೆಹುಸೂರು, ಕಣಿವೆನಾರಾಯಣಪುರ, ಚಿಗಟೇನ ಹಳ್ಳಿ, ಮುದ್ದೇನಹಳ್ಳಿ, ಸುದ್ದಳ್ಳಿ, ಕಳವಾರ ಗ್ರಾಮಗಳಿಗೆ ಭೇಟಿ ನೀಡಿ ಜನರ ವಿಶ್ವಾಸ ಗಳಿಸುವ ಕೆಲಸಕ್ಕೆ ಕೈಹಾಕಿ ಅದರಲ್ಲಿ ಯಶಸ್ವಿಯಾದರು.ಈ ಮೂಲಕ ಒಂದು ನೂತನ ಹಾಗೂ ಜನಪ್ರಿಯ ಕಾರ್ಯಕ್ರಮಕ್ಕೆ  ಮುನ್ನುಡಿ ಬರೆದರು. ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಹೆಸರಿನಲ್ಲಿ ಪ್ರತಿ ಹಳ್ಳಿಗೂ ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಅ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ಅಧಿಕಾರಿಗಳನ್ನು ನೆಲದ ಚಾಪೆ ಮೇಲೆ ಕೂರಿಸಿ ಅಲ್ಲೆ ಪರಿಹಾರ ಕೊಡಿಸುವ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.

ಇನ್ನೂ ಶಾಸಕ ಪ್ರದೀಪ್ ಈಶ್ವರ್ ಅವರ ನೂತನ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಮೊದಲಿಗೆ ಮುದ್ದೇನಹಳ್ಳಿ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು ಮೊದಲಿಗೆ ಗಟ್ಟಿಗಾನಹಳ್ಳಿ ಗ್ರಾಮದಿಂದ ಚಾಲನೆ ನೀಡಿದರು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮಸ್ಥರು ಶಾಸಕ ಪ್ರದೀಪ್ ಈಶ್ವರ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ನಂತರ ಅರಳಿ ಮರದ ಕೆಳಗೆ ಚಾಪೆ ಮೇಲೆ ಒಂದೆಡೆ ಅಧಿಕಾರಿಗಳನ್ನು ಮತ್ತೊಂದೆಡೆ ಸ್ಥಳೀಯ ಗ್ರಾಮಸ್ಥರನ್ನು ಮುಖಾಮುಖಿ ಕೂರಿಸಿ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದರು.

ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶಿಲ್ದಾರ್, ಸರ್ವೆಡಿಪಾರ್ಟ್ಮೆಂಟ್ ಸಿಬ್ಬಂದಿ, ಆಹಾರ ನಾಗರೀಕ ಸರಬರಾಜು ಅಧಿಕಾರಿಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ರಾಜ್ಯ ಸರ್ಕಾರದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮಕ್ಕಳ ಪೌಷ್ಠಿಕತೆ ವೃದ್ದಿಸಲು ಆರು ದಿನಗಳ ಕಾಲ ಮೊಟ್ಟೆ ಬಾಳೆಹಣ್ಣು ವಿತರಣೆ ಕಾರ್ಯಕ್ರಮಕ್ಕೆ  ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಓದಿ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದೇನೆ. ಅಪ್ಪ ಅಮ್ಮ ಇಲ್ಲದ ಹುಡುಗ ಶಾಸಕನಾಗಿದ್ದೇನೆ. ನೀವು ಕೂಡ ಚೆನ್ನಾಗಿ ಓದಿ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ಸರಸ್ವತಿ ಇದ್ರೆ ಹಣ ತಾನಾಗೇ ಹುಡುಕಿಕೊಂಡು ಬರುತ್ತದೆ. ಹಾಗಾಗಿ ಚೆನ್ನಾಗಿ ಓದಿ ಸರ್.ಎಂ ವಿಶ್ವೇಶ್ವರಯ್ಯ ಅವರ ರೀತಿ ದೊಡ್ಡ ಮಟ್ಟದಲ್ಲಿ ಸಾಧಕರಾಗಬೇಕು.ಸರ್ಕಾರಿ ಶಾಲೆಯ ಮಕ್ಕಳು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಒಳ್ಳೆ ಸೌಕರ್ಯ ನೀಡುತ್ತಿದ್ದಾರೆ ಅದನ್ನು ಚೆನ್ನಾಗಿ ಬಳಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಇದೇ ವೇಳೆ ಕಳವಾರ ಗ್ರಾಮದಲ್ಲಿ ತಾಲೂಕು ಆಡಳಿತದವತಿಯಿಂದ ನೂತವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವವನ್ನು ಕೂಡ ಲೋಕಾರ್ಪಣೆ ಮಾಡಿ ಮಾತನಾಡಿದರು.

ಶಾಸಕ ಪ್ರದೀಪ್ ಈಶ್ವರ್ ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ತಂದೆತಾಯಿ ಇಬ್ಬರೂ ಇಲ್ಲದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ನೀಡಿದ್ದ ಭರವಸೆಯನ್ನು ಬುಧವಾರ ಚೀಗಟೇನಹಳ್ಳಿ ಗ್ರಾಮದಲ್ಲಿ ಪೂರೈಸಿದರು.ತಂದೆತಾಯಿ ಇಬ್ಬರೂ ಇಲ್ಲದ ಇಬ್ಬರು ಮಕ್ಕಳ ವಾರಸುದಾರರಿಗೆ ಸ್ಥಳದಲ್ಲಿಯೇ ೨ ಲಕ್ಷ ಹಣ ನೀಡಿ ಬ್ಯಾಂಕಿನಲ್ಲಿ ಇಟ್ಟು ಓದಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನೀಲ್ ಕುಮಾರ್, ಇಒ ಮಂಜುನಾಥ್, ಟಿಹೆಚ್‌ಒ ಮಂಜುಳಾ, ಕಣಿವೆನಾರಾಣಪುರ ನಾರಾಯಣಸ್ವಾಮಿ, ಸುಧಾವೆಂಕಟೇಶ್, ಮುದ್ದೇನಹಳ್ಳಿ ಮೋಹನ್ ಹಾಗೂ ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಡಳಿತ ಸಿಬ್ಬಂದಿ, ವಿಧ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.