Friday, 22nd November 2024

MLA Puttaswamygowda: ಭಾರತೀಯ ಸಮಾಜದ ಬದುಕು ಹಸನಾಗಲು ವಿಶ್ವ ಕರ್ಮ ಜನಾಂಗದ ಕೊಡುಗೆ ಅಪಾರ -ಶಾಸಕ ಪುಟ್ಟಸ್ವಾಮಿಗೌಡ ಹೇಳಿಕೆ

ಗೌರಿಬಿದನೂರು: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿಯನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕ ಪುಟ್ಟಸ್ವಾಮಿಗೌಡ ಮಾತನಾಡಿ ಹಿಂದಿನಿಂದಲೂ ಭಾರತೀಯ ಸಮಾಜದ ಬದುಕು ಹಸನಾಗಲು ವಿಶ್ವ ಕರ್ಮ ಜನಾಂಗದ ಕೊಡುಗೆ ಅಪಾರ, ರೈತರಿಗೆ ಬೇಕಾದ ಉಪಕಾರಣಗಳಿಂದ, ಹಿಡಿದು ಪ್ರಸಕ್ತ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ, ಇಂಜಿನಿಯರ್‌ಗಳಿಗೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ತಯಾರಿಸಲು  ಈ ಸಮುದಾಯದವರಿಗೆ ಒಲಿದ ಕುಲಕಸುಬಾಗಿದೆ ಎಂದರು.

ಹಳೇಬೀಡು, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಮದುರೈ ಮೀನಾಕ್ಷಿ, ಬೃಹದೇಶ್ವರ ದೇವಸ್ಥಾನ, ಇಂತಹ ದೇವಸ್ಥಾನ ನಿರ್ಮಾಣದ ಕೌಶಲ್ಯಗಳು ಸಾವಿರಾರು ವರ್ಷಗಳ ಹಿಂದೆಯೇ  ಅವರಿಗೆ ತಿಳಿದಿತ್ತು. ಆದರೆ ಆಧುನಿಕ ಸಮಾಜದಲ್ಲಿ ಯಾಂತ್ರಿಕರಣದ ಪರಿಣಾಮ ನಿಮ್ಮ ಕುಲ ಕಸುಬಿಗೆ ಸ್ವಲ್ಪ ಹಿನ್ನಡೆಯಾಗಿದೆ. ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಮಹೇಶ್ ಪತ್ರಿ ಮಾತನಾಡಿ, ವಿಶ್ವ ಕರ್ಮ ಎಂದರೆ ದೇವರ ಶಿಲ್ಪಿ ಎಂದು ಅರ್ಥ. ಮಹಾಭಾರತ ದಲ್ಲಿಯೂ ಸಹ ವಿಶ್ವ ಕರ್ಮದ ಉಲ್ಲೇಖವಿದೆ. ದೇವರ ಕಾಲದಿಂದಲೂ, ಶಿವನ ತ್ರಿಶೂಲ, ಇಂದ್ರನ ಸುದರ್ಶನ  ಚಕ್ರ ಹೀಗೆ ದೇವರ ಆಯುಧಗಳನ್ನು ಸಹ ವಿಶ್ವ ಕರ್ಮರು ಸೃಷ್ಟಿ ಮಾಡಿದರು ಎಂದು ಹೇಳಲಾಗುತ್ತದೆ. ಇಂತಹ ಸಮುದಾಯದ ಏಳ್ಗೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಪ್ರಮೀಳಾ, ಮಂಜುಳಾ, ವಿಶ್ವಕರ್ಮ ಸಮುದಾಯದ ಮುಖಂಡ ಎಂ.ಎನ್.ರಾಧಾಕೃಷ್ಣ, ಅಧಿಕಾರಿ ವರ್ಗ ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: Chickballapur News: ತಮ್ಮ ವೃತ್ತಿಗಳಲ್ಲಿ ನೂತನ ಕೌಶಲ್ಯ ರೂಢಿಸಿಕೊಳ್ಳಿ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ