ಬಾಗೇಪಲ್ಲಿ: ತಂತ್ರಜ್ಞಾನ ಆಧಾರಿತ ಕೃಷಿಯಲ್ಲಿ ರೈತರು ಪರಿಣತಿ ಪಡೆದು ಅದನ್ನು ತಾವು ಮಾಡುವ ಬೇಸಾಯ ಕ್ರಮಗಳಲ್ಲಿ ಆಳವಡಿಸಿಕೊಂಡರೆ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕಿನಿಂದ ಬೇರ್ಪಟ್ಟ ಚೇಳೂರು ಹೊಸ ತಾಲೂಕಿನ ಪಾತಪಾಳ್ಯ ಹೋಬಳಿಯ ಗುಮ್ಮಾಲಪಲ್ಲಿ ಉಪ ಜಲಾನಯನದ ನಾರೆಮದ್ದೇಪಲ್ಲಿ ಕಾರ್ಯಕಾರಿ ಸಮಿತಿಗೆ ಸಂಬಂಧಿಸಿದಂತೆ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಜನಸ್ಪಂದನ ಕಾರ್ಯಕ್ರಮ ಜನರ ಬಳಿಗೆ ತಾಲೂಕು ಆಡಳಿತವನ್ನು ತೆಗೆದುಕೊಂಡು ಹೋಗುವ ಉತ್ತಮ ಉದ್ದೇಶ ವನ್ನು ಹೊಂದಿದೆ. ಇದಲ್ಲಿ ಸಕ್ರಿಯವಾಗಿ ಭಾಗಿಯಾಗುವ ಮೂಲಕ ಯೋಜನೆಗಳ ಬಗ್ಗೆ ಮಾಹಿತಿ ಕಷ್ಟಗಳಿಗೆ ಪರಿಹಾರ ಪಡೆಯಬಹುದು ಎಂದರು. ರಿವಾರ್ಡ್ ಯೋಜನೆಯಡಿ ಒಟ್ಟು 70 ಜನ ರೈತ ಫಲಾನುಭವಿಗಳಿಗೆ ಹಸುಗಳ ನೆಲಹಾಸು, 22 ಜನ ರೈತರಿಗೆ ಮೇವು ಕತ್ತರಿಸುವ ಯಂತ್ರಗಳು, 10 ಜನ ರೈತರಿಗೆ ಬೇವಿನ ಬೀಜಗಳು ಮತ್ತು 8 ರೈತರಿಗೆ ವಿವಿಧ ಕೃಷಿ ಪರಿಕರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ತೊಗರಿ ಬೆಳೆಯಲ್ಲಿ ಕುಡಿ ಚುವುಟುವ ತಾಂತ್ರಿಕತೆಯ ಬಗ್ಗೆ ಪ್ರಾತ್ಯಕ್ಷಿತೆಯ ಮೂಲಕ ರೈತಾಪಿ ಗಳಿಗೆ ತರಬೇತಿ ನೀಡಲಾಯಿತು.
ನಂತರ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿಯನ್ನು ಸಿಂಪಡಣೆ ಮಾಡುವ ತಾಂತ್ರಿಕತೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಲಕ್ಷ್ಮಿ, ಜಿ.,ಕೃಷಿ ಅಧಿಕಾರಿಗಳಾದ ಶ್ರೀ ಶಂಕರಯ್ಯ ಎನ್, ಜಿಲ್ಲಾ ಸಂಯೋಜಕರಾದ ಶ್ರೀ ಗಂಗರಾಜು ರಿವಾರ್ಡ್ ಯೋಜನೆಯ ಸಿಬ್ಬಂದಿಗಳು ಹಾಗೂ ಹಲವಾರು ರೈತರು ಹಾಜರಿದ್ದರು.