*ಶಕ್ತಿ, ಗೃಹಲಕ್ಷ್ಮೀ ಯೋಜನೆಗಳ ಮೂಲಕ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮ
*ಪ್ರತಿ ದಿನವೂ ಮಹಿಳಾ ದಿನಾಚರಣೆಯಾಗಬೇಕು; ಇದೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ
ಬೆಂಗಳೂರು: “ಒಂದು ಸಮಾಜದ ಬೆಳವಣಿಗೆಯನ್ನು ನಾವು ಆ ಸಮಾಜದ ಹೆಣ್ಣು ಮಕ್ಕಳ ಏಳ್ಗೆಯ ಮೇಲೆ ನಿರ್ಧರಿಸುತ್ತೇವೆ” ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಹೆಜ್ಜೆ ಇಟ್ಟಿದೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಟೊಂಕ ಕಟ್ಟಿ ನಿಂತಿದೆ. ಅನೇಕ ಮಹಿಳಾ ಪರ ಯೋಜನೆ ಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ, ಮಹಿಳಾ ಸಬಲೀಕರಣದ ದೃಷ್ಟಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆ ಮೂಲಕ ಅಂಬೇಡ್ಕರ್ ಅವರ ಹಾಗೂ ಸಂವಿಧಾನದ ಆಶಯಗಳನ್ನು ಈಡೇರಿಸಿದೆ ಎಂದು ಶಾಸಕ ದಿನೇಶ ಗೂಳಿಗೌಡ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ದಿನೇಶ್ ಗೂಳಿಗೌಡ ಅವರು, ಮಾರ್ಚ್ 8 ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ದಿನಾಚರಣೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ಸಿಗಬೇಕು ಎಂಬುದು ವಿಶ್ವಸಂಸ್ಥೆಯ ಆಶಯವೂ ಆಗಿದೆ. ಆ ಆಶಯವನ್ನು ಕರ್ನಾಟಕ ಸರ್ಕಾರ ತನ್ನ ಮಹಿಳಾ ಪರ ಯೋಜನೆಗಳ ಮೂಲಕ ಅಕ್ಷರಶಃ ಈಡೇರಿಸಿದೆ. ಇದೊಂದು ದಿನ ಮಾತ್ರವಲ್ಲದೆ ಪ್ರತಿದಿನವೂ, ಅನುಕ್ಷಣವೂ ಮಹಿಳಾ ದಿನವೇ ಆಗಿರಲಿ ಎಂಬುದು ನಮ್ಮ ಆಶಯವಾಗಿದೆ.
ಮಹಿಳೆಯರಿಗೆ ಶಕ್ತಿ
ಕಾಂಗ್ರೆಸ್ ಸರ್ಕಾರ “ಶಕ್ತಿ” ಯೋಜನೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಿದೆ. ಈವರೆಗೆ 166.55 ಕೋಟಿ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ 3983 ಕೋಟಿ ರೂ.ಗಳನ್ನು ವ್ಯಯಿಸಿದೆ. ಇದರಿಂದ ರಾಜ್ಯಾದ್ಯಂತ ವಿವಿಧ ಉಪ ಉದ್ಯೋಗಗಳಿಗೆ ಅನುಕೂಲವಾಗಿದೆ ಎಂದಿದ್ದಾರೆ.