Thursday, 24th October 2024

ಎಂಎಲ್‌ಸಿ ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ: ಮನೆಗೆ ಕಲ್ಲು ತೂರಾಟ

ಮಂಗಳೂರು: ರಾಜ್ಯಪಾಲರ ವಿರುದ್ಧದ ಎಂಎಲ್‌ಸಿ ಐವನ್ ಡಿ’ಸೋಜಾ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಈಗಾಗಲೇ ಪ್ರತಿರೋಧಗಳು ವ್ಯಕ್ತವಾಗಿದ್ದವು. ಈ ಘಟನೆ ವಿಕೋಪಕ್ಕೆ ತಿರುಗಿದ್ದು, ಐದಾರು ಮಂದಿ ದುಷ್ಕರ್ಮಿಗಳಿದ್ದ ತಂಡ ಐವನ್ ಮನೆಗೆ ಕಲ್ಲು ತೂರಾಡಿ ಪರಾರಿಯಾಗಿದ್ದಾರೆ.

ವೆಲೆನ್ಸಿಯಾದಲ್ಲಿರುವ ಐವನ್ ಡಿಸೋಜರ ಮನೆ ಬಳಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಕಲ್ಲು ತೂರಾಡಿ ಘೋಷಣೆಗಳನ್ನು ಕೂಗಿ ಪರಾರಿಯಾಗಿದೆ ಎನ್ನಲಾಗಿದೆ. ಈ ಸಂದರ್ಭ ಐವನ್ ಡಿಸೋಜ ಮನೆಯಲ್ಲಿರದೆ ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್‌ಗೆಂದು ಹೋಗಿದ್ದರು ಎನ್ನಲಾಗಿದೆ.

ಒಮ್ಮೆ ಕಲ್ಲು ತೂರಾಟ ನಡೆಸಿ ನಂತರ 2 ನಿಮಿಷ ಬಿಟ್ಟು ಮತ್ತೆ ಬೈಕ್ ನಲ್ಲಿ ಬಂದ ಯುವಕರು ಕಲ್ಲು ತೂರಾಟ ಮುಂದುವರಿಸಿದ್ದಾರೆ. ಇದರಿಂದ ಐವನ್ ಮನೆಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಯಾವುದೇ ಹಾನಿಯಾಗಿಲ್ಲ ವೆಂದು ಹೇಳಲಾಗಿದೆ. ಸದ್ಯ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರುದ್ದ ಪ್ರಕರಣ ದಾಖಲಿಸಲು ಬಿಜೆಪಿ ಯುವ ಮೋರ್ಚಾ ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದೆ. ಎಫ್ ಐ ಆರ್ ದಾಖಲಿಸಬೇಕು ಎಂದು ಒತ್ತಾಯಿಸಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಆ.21ರ ಬುಧವಾರ ಬರ್ಕೆ ಠಾಣೆಗೆ ಆಗಮಿಸಿದರು. ಎಸಿಪಿ ಪ್ರತಾಪ ಸಿಂಗ್ ಥೋರಟ್ ಅವರ ಜತೆ ಮೋರ್ಚಾ ಪದಾಧಿಕಾರಿಗಳು ಮಾತುಕತೆ ನಡೆಸಿದರು.