ಬೆಂಗಳೂರು: ಅನುದಾನ ರಹಿತ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರೀತಿ ಹೋರಾಟಕ್ಕೆ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ (MLC Puttanna) ತಿಳಿಸಿದ್ದಾರೆ.
ವಿವಿ ಪುರಂ(VV Puram)ನ ಶ್ರೀ ವಾಸವಿ ಕನ್ವೆನ್ಸನ್ ಸೆಂಟರ್ ನಲ್ಲಿ ಬೆಂಗಳೂರು ದಕ್ಷಿಣ(Bangalore South) ವಲಯ 1 ಹಾಗೂ 2 ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಈಡೇರಿಲ್ಲ. ಈ ಸಂಬಂಧ ಸರ್ಕಾರದ ಜೊತೆ ಸಂಧಾನ ಮಾತುಕತೆ ನಡೆಸುತ್ತೇನೆ. ಸಾಧ್ಯವಾಗದಿದ್ದರೆ ಹೋರಾಟ ಮಾಡುತ್ತೇನೆ, ಹೋರಾಟ ತಮಗೆ ಹೊಸದಲ್ಲ. ವಿದ್ಯಾರ್ಥಿ ಹಂತದಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್(Tejaswini AnanthKumar)ಮಾತನಾಡಿ, ತಾವು ಅನ್ನದಾಸೋಹ(Annadasoha)ದ ಮೂಲಕ ಶಾಲೆಗಳ ಜೊತೆ ನಿಕಟ ಬಾಂಧವ್ಯ ಹೊಂದಿದ್ದು, ಶಿಕ್ಷಕರು ವಿದ್ಯಾರ್ಥಿಗಳ ನಿಜವಾದ ಮಾರ್ಗದರ್ಶಕರು ಎಂದರು.
ಕ್ಯಾಮ್ಸ್ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕ್ರೇಡೋ ಅರ್ಲಿ ಚೈಲ್ಡ್ ಹುಡ್ ಸಲ್ಯುಷನ್ಸ್ ಸಹ ಸಂಸ್ಥಾಪಕರಾದ ಮೃದುಲ ಶ್ರೀಧರ್, ಒಕ್ಕಲಿಗ ಸಂಘದ ನಿರ್ದೇಶಕ ವೆಂಕಟರಾಮೇಗೌಡ, ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ 1 ಮತ್ತು 2 ಅಧ್ಯಕ್ಷರಾದ ಜಯಪ್ರಕಾಶ್, ಗಿನ್ನಿಸ್ ವಿಶ್ವ ದಾಖಲೆದಾರರು, ಬಸವೇಶ್ವರ ಶಾಲೆಯ ಮುಖ್ಯಸ್ಥೆ ರಂಗಲಕ್ಷ್ಮಿ ಶ್ರೀನಿವಾಸ ಮತ್ತಿತರರು ಪಾಲ್ಗೊಂಡಿದ್ದರು.