Thursday, 12th December 2024

ಸ್ವಾಭಿಮಾನದ ಬದುಕಿಗೆ ಮೋದಿ ಯೋಜನೆಗಳು ಸಹಕಾರಿ

ತುಮಕೂರು: ದೇಶದ ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಸ್ವಾವಲಂಬಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ 150ಕ್ಕೂ ಹೆಚ್ಚು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
 ನಗರದ ನಗರಪಾಲಿಕೆ ಆವರಣದಲ್ಲಿ ಲೀಡ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಜನರ ಸರ್ವತೋಮುಖ ಬೆಳವಣಿಗೆಗೆ ಪ್ರಧಾನಿ ಮೋದಿಯವರ ಯೋಜನೆಗಳು ಸಹಕಾರಿಯಾಗಿವೆ. ಜನಸಾಮಾನ್ಯರಿಗೆ ಉತ್ತಮ ಬದುಕು, ಶಿಕ್ಷಣ, ಆರೋಗ್ಯ, ಸುರಕ್ಷತೆ ಹೀಗೆ ಎಲ್ಲಾರೀತಿಯಲ್ಲೂ ಯೋಜನೆಗಳು ಅನುಕೂಲವಾಗಿವೆ.  ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ದೇಶದ ಜನ, ಕುಟುಂಬ ಸ್ವಾಭಿಮಾನಿಯಾಗಿ ಸಮಾಜದಲ್ಲಿ ತಲೆಯೆತ್ತಿ ಬಾಳಲು ಬೇಕಾದ ಆಹಾರ, ಅರೋಗ್ಯ, ವಿದ್ಯೆ, ಸಾಮಾಜಿಕ ಭದ್ರತೆ, ರೈತರು, ಕಾರ್ಮಿಕರ ಸುರಕ್ಷೆಗೆ ಪೂರಕವಾದ 150ಕ್ಕೂ ಹೆಚ್ಚು ಮಹತ್ತರವಾದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಯವರು ಜಾರಿಗೆ ತಂದಿದ್ದಾರೆ. ಜಾತಿಭೇದವಿಲ್ಲದೆ ಎಲ್ಲಾ ವರ್ಗದವರಿಗೂ ಅನುಕೂಲವಾಗವ ಈ ಯೋಜನೆಗಳೇ ನರೇಂದ್ರ ಮೋದಿಯವರ ಗ್ಯಾರಂಟಿ. ಎಲ್ಲರೂ ಈ ಯೋಜನೆಗಳ ಪ್ರಯೋಜನ ಪಡೆದು ಪ್ರಗತಿಯಾದರೆ ಭಾರತ ವಿಕಸಿತವಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ದೇಶದ ಎಲ್ಲಾ ಜನರಿಗೆ ಪ್ರಧಾನ ಮಂತ್ರಿಯವರ ಯೋಜನೆಗಳನ್ನು ಪರಿಚಯ ಮಾಡಿಸಿ, ಅವರನ್ನು ಯೋಜನೆ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳ ಎಲ್ಲಾ ವಾರ್ಡ್ಗಳಲ್ಲೂ ಈ ಯಾತ್ರೆ ಸಂಚಾರ ಮಾಡಿ ಜನರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ರಾಜ್ಯದಲ್ಲೇ ಅತಿ ಹೆಚ್ಚು ಎನ್ನುವಂತೆ ನಮ್ಮ ಜಿಲ್ಲೆಯಲ್ಲಿ 1.7 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲೇ ಕರ್ನಾಟಕದಲ್ಲಿ ಹೆಚ್ಚು ಜನ ಈ ಯೋಜನೆ ಫಲ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದರು. ನಗರ ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹ ಮೂರ್ತಿ, ಸದಸ್ಯರಾದ ಮಂಜುನಾಥ್, ದೀಪಶ್ರೀ ಮಹೇಶ್‌ಬಾಬು, ಮಂಜುಳಾ, ನವೀನಾ, ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ರವಿ  ಭಾಗವಹಿಸಿದ್ದರು.