Sunday, 15th December 2024

MP Dr K Sudhakar: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಸದ ಡಾ.ಕೆ.ಸುಧಾಕರ್ ಮನವಿ

ಹುಣಸೆ ತೋಪು, ಶಿವಗಂಗೆ, ವಿದುರಾಶ್ವತ್ಥ, ದೇವನಹಳ್ಳಿ ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ

ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಗಳಡಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೋರಿಕೆ

ಚಿಕ್ಕಬಳ್ಳಾಪುರ: ದೇವನಹಳ್ಳಿ ತಾಲೂಕಿನ ನಲ್ಲೂರು ಹುಣಸೆ ತೋಪು, ಶಿವಗಂಗೆ, ದೇವನಹಳ್ಳಿ ಕೋಟೆ, ಆವತಿ ಬೆಟ್ಟ ಮೊದಲಾದ ಸ್ಥಳಗಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಸೌಕರ್ಯ ಕಲ್ಪಿಸುವಂತೆ ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಂಸದ ಸುಧಾಕರ್ ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿನ ಪುರಾತನ ತೀರ್ಥ ಕ್ಷೇತ್ರಗಳು ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸುವ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಗಳಡಿ ಈ ತಾಣಗಳನ್ನು ಅಭಿವೃದ್ಧಿ ಮಾಡಬೇಕೆಂದು ಕೋರಲಾಗಿದೆ ಎಂದಿದ್ದಾರೆ.

ಭಾರತದ ಮೊದಲ ಜೀವವೈವಿಧ್ಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಹುಣಸೆ ತೋಪಿನಲ್ಲಿ 410 ವರ್ಷಗಳಷ್ಟು ಹಳೆಯದಾದ ಭಾರಿ ಗಾತ್ರದ ಸುಮಾರು 300 ಹುಣಸೆ ಮರಗಳಿವೆ. ಇದು ಚೋಳ ಅರಸರ ಕಾಲದ್ದಾಗಿದ್ದು, ಇಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಿದರೆ ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದು. ಇದು ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಅಧ್ಯಯನ ಯೋಗ್ಯ ಸ್ಥಳವೂ ಆಗಿದೆ. ಇಲ್ಲಿ ಮಕ್ಕಳ ಉದ್ಯಾನ ನಿರ್ಮಾಣ, ಇತಿಹಾಸದ ಮಾಹಿತಿ ನೀಡುವ ಫಲಕಗಳ ಅಳವಡಿಕೆ ಹಾಗೂ ಪ್ರವಾಸಿಗರಿಗೆ ಮನರಂಜನಾ ಆಟಗಳ ವ್ಯವಸ್ಥೆ ಮಾಡುವ ಮೂಲಕ ಉತ್ತಮ ಪ್ರವಾಸೋದ್ಯಮಕ್ಕೆ ದಾರಿ ಮಾಡಬಹುದು ಎಂದು ವಿವರಿಸಿದ್ದಾರೆ.

ಹೊಸಕೋಟೆಯ ಅಮಾನಿಕೆರೆ ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದ್ದು, ಪ್ರವಾಸಿಗರು ಹಾಗೂ ವನ್ಯಜೀವಿ ಛಾಯಾಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಕೆರೆಯ ಸುತ್ತ ವಿಹಾರ ಪಥ ಹಾಗೂ ರಸ್ತೆ ನಿರ್ಮಾಣ, ಬೋಟಿಂಗ್ ವ್ಯವಸ್ಥೆ, ಮಕ್ಕಳ ಉದ್ಯಾನ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಸೌಕರ್ಯಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು. ದಕ್ಷಿಣ ಕಾಶಿ ಎಂದೇ ಹೆಸರು ಪಡೆದಿರುವ ಶಿವಗಂಗೆಗೆ ಪ್ರತಿ ದಿನ ಸುಮಾರು 6000 ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಗೆ ಕೇಬಲ್ ಕಾರ್ ಅಥವಾ ರೋಪ್‌ವೇ, ಹೊನ್ನಾದೇವಿ ಮತ್ತು ಗಂಗಾಧರೇಶ್ವರ ಸ್ವಾಮಿ ದೇವಾಲಯಕ್ಕೆ ರಸ್ತೆ ನಿರ್ಮಾಣ, ರಾಕ್ ಕ್ಲೈಬಿಂಗ್‌ನಂತಹ ಚಟುವಟಿಕೆಗಳು ಮೊದಲಾದ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸಿ ಹಾಗೂ ಧರ್ಮ ಕ್ಷೇತ್ರವಾಗಿ ಅಭಿವೃದ್ಧಿ ಮಾಡಬೇಕಿದೆ ಎಂದು ಕೋರಿದ್ದಾರೆ.

ಇದೇ ರೀತಿ ದೇವನಹಳ್ಳಿ ಕೋಟೆಯ ಬಳಿ ರಸ್ತೆಗಳ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಮೊದಲಾದ ಪ್ರವಾಸಿ ಮೂಲಸೌಕರ್ಯ ನೀಡಬೇಕಿದೆ. ಜೊತೆಗೆ, ಗುಂಡಮಗೆರೆ ಕೆರೆ ಹಾಗೂ ಆವತಿ ಬೆಟ್ಟಕ್ಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಶೌಚಾಲಯ, ಸೌರ ವಿದ್ಯುತ್ ದೀಪಗಳ ಅಳವಡಿಕೆ ಮೂಲಕ ಇವುಗಳನ್ನೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಬೇಕೆಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ವಿದುರಾಶ್ವತ್ಥ ಅಭಿವೃದ್ಧಿಗೆ ಮನವಿ

ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಹೆಸರು ಪಡೆದಿರುವ ಈ ಸ್ಥಳದಲ್ಲಿ 38 ಸ್ವಾತಂತ್ರ‍್ಯ ಹೋರಾಟಗಾರರು ಹುತಾತ್ಮರಾಗಿದ್ದರು. ಇಲ್ಲಿ ವಿದುರ ನಾರಾಯಣ ದೇವಸ್ಥಾನ, ವಿದುರ ನೆಟ್ಟಿರುವ ಅಶ್ವತ್ಥ ವೃಕ್ಷವಿದೆ. ಈ ಭಾಗದಲ್ಲಿ ಪ್ರವಾಸಿಗರಿಗೆ ಆಸನ ವ್ಯವಸ್ಥೆ, ವೀರಸೌಧದಲ್ಲಿ ಆಡಿಯೋ ವ್ಯವಸ್ಥೆ, ಮ್ಯೂಸಿಯಂ ನವೀಕರಣ ಮಾಡಬೇಕಿದೆ. ಒಟ್ಟು 3 ಕೋಟಿ ರೂ. ಅನುದಾನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಕೈಗೊಳ್ಳಬಹುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇತರೆ ಪ್ರವಾಸಿ ತಾಣಗಳ ಸುಧಾರಣೆ

ಮಂಚೇನಹಳ್ಳಿಯ ಮಿಣಕನಗುರ್ಕಿ, ಗುಡಿಬಂಡೆಯ ಸುರಸದ್ಮಗಿರಿ ಬೆಟ್ಟ, ಆವಲಬೆಟ್ಟ,ಆದಿನಾರಾಯಣಸ್ವಾಮಿ ಬೆಟ್ಟ,ಶಿಡ್ಲಘಟ್ಟ ತಾಲೂಕಿನ ತಲಕಾಯಲ ಬೆಟ್ಟ,  ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಸ್ಥಾನ, ಗುಮ್ಮನಾಯಕನಪಾಳ್ಯ ಕೋಟೆ ಹಾಗೂ ದೇವಿಕುಂಟೆ ಕೋಟೆಯಲ್ಲಿ ವಿವಿಧ ಮೂಲಸೌಕರ್ಯ  ಕಲ್ಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ಪತ್ರದಲ್ಲಿ ಕೋರಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ನಿರ್ಮಾಣವಾದ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ವನ್ನು ದುರಸ್ತಿ ಮಾಡಬೇಕಿದೆ. ಉದ್ಯಾನದ ಅಭಿವೃದ್ಧಿ, ಸೌರ ದೀಪ ಅಳವಡಿಕೆ, ಕಲ್ಯಾಣಿ ಅಭಿವೃದ್ಧಿ ಮೊದಲಾದ ಕಾರ್ಯಗಳನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಾಡಬಹುದು ಎಂದು ಕೇಂದ್ರ ಪ್ರವಾಸೋಧ್ಯಮ ಸಚಿವರಿಗೆ ಸಲಹೆ ನೀಡಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: MP Dr K Sudhakar: ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಎಂದೂ ವೇದಿಕೆ ಹಂಚಿ ಕೊಳ್ಳಲಾರೆ : ಸಂಸದ ಸುಧಾಕರ್ ಘೋಷಣೆ