Saturday, 14th December 2024

Muda Scam: ಮುಡಾದಲ್ಲಿ ಮತ್ತೊಂದು ಹಗರಣ; ವೃದ್ಧ ದಂಪತಿಗೆ ವಂಚಿಸಿ 5.14 ಎಕರೆ ಭೂಮಿ ಸ್ವಾಧೀನ!

Muda Scam

ಮೈಸೂರು: ಉಡುಪಿ ಮೂಲದ ವೃದ್ಧ ದಂಪತಿಗೆ ಅವರ ಖಾಸ ಸಂಬಂಧಿಯೊಬ್ಬನನ್ನು ಜತೆಗೂಡಿಸಿಕೊಂಡ ಮುಡಾ ಅಧಿಕಾರಿಗಳು, 50 ಕೋಟಿ ಬೆಲೆ ಬಾಳುವ 5 ಎಕರೆ 14 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡು ಮೂಲ ಮಾಲೀಕರಿಗೆ ಒಂದು ನಯಾಪೈಸೆಯೂ ಪರಿಹಾರ ಸಿಗದಂತೆ ವಂಚನೆ (Muda Scam) ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಉಡುಪಿ ಮೂಲದ ವೃದ್ಧ ದಂಪತಿಯಾದ ಸುಬ್ರಹ್ಮಣ್ಯ, ದೇವಕಿ, ಮಂಜುನಾಥ್ ಮತ್ತು ವಿಕ್ಕಿ ಎಂಬವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಸುಬ್ರಹ್ಮಣ್ಯ ಕುಟುಂಬ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸ್ವಂತ ಭಾವಮೈದುನ ಪೊನ್ನಪ್ಪ ಎಂಬವರ ಮೂಲಕ 1986 ರಲ್ಲಿ ಮೈಸೂರು ತಾಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂ. 118 ರಲ್ಲಿ 5 ಎಕರೆ 14 ಗುಂಟೆ ಜಮೀನನ್ನು ಖರೀದಿ ಮಾಡುತ್ತಾರೆ. ಇದು ದೇವಕಿ ಅವರ ಹೆಸರಲ್ಲಿ ಕ್ರಯವಾಗಿ ಖಾತೆಯಾಗುತ್ತದೆ. ನಂತರ ಈ ಭೂಮಿ ಸುಬ್ರಹ್ಮಣ್ಯ ಅವರ ಹೆಸರಿಗೂ ಜಂಟಿ ಖಾತೆಯಾಗುತ್ತದೆ.

ಜಮೀನಿನಲ್ಲಿ ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ, ವಿದ್ಯುತ್ ಸಂಪರ್ಕವನ್ನು ಸುಬ್ರಹ್ಮಣ್ಯ ಅವರ ಹೆಸರಲ್ಲಿ ಪಡೆಯಲಾಗುತ್ತದೆ. ಬಳಿಕ ಜಮೀನು ನಿರ್ವಹಣೆಯನ್ನು ಪೊನ್ನಪ್ಪ ಅವರಿಗೆ ವಹಿಸಿ ಸುಬ್ರಹ್ಮಣ್ಯ ಮತ್ತು ದೇವಕಿ ಅವರು ಮತ್ತೆ ವಿದೇಶಕ್ಕೆ ತೆರಳುತ್ತಾರೆ.

ಇದಾದ ಬಳಿಕ 1991ರಲ್ಲಿ ಮುಡಾ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ 4(1) ಮತ್ತು 1992 ರಲ್ಲಿ 6(1) ಜಾರಿ ಮಾಡುತ್ತದೆ. ಇದನ್ನು ತಿಳಿದ ಪೊನ್ನಪ್ಪ ತನ್ನ ಸಹೋದರಿ ಹೆಸರಲ್ಲಿ ನಕಲಿ ಜಿಪಿಎ ಸೃಷ್ಟಿಸಿಕೊಂಡು ತಾನೇ ಜಮೀನು ಹಕ್ಕುದಾರ ಎಂದು ಬಿಂಬಿಸಿ ಮುಡಾ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾನೆ.

ಇದು ನಕಲಿ ಜಿಪಿಎ ಎಂದು ಗೊತ್ತಿದ್ದರೂ ಮುಡಾ ಅಧಿಕಾರಿಗಳು ಪೊನ್ನಪ್ಪ ಅವರೊಂದಿಗೆ ಉದ್ದೇಶಪೂರ್ವಕವಾಗಿ ವ್ಯವಹರಿಸುತ್ತಾರೆ. ಬಳಿಕ ಮತ್ತೆ 1996 ರಲ್ಲಿ ಇದೇ ಪೊನ್ನಪ್ಪ ಬೆಂಗಳೂರು ಗಾಂಧಿನಗರ ನೋಂದಣಾಧಿಕಾರಿ ಕಚೇರಿಯ ನಕಲಿ ಸೀಲು ಸಹಿ ಉಳ್ಳ ಮತ್ತೊಂದು ಜಿಪಿಎ ಸೃಷ್ಟಿಸಿಕೊಂಡು ಇಂದು ನೋಂದಾಯಿತ ಜಿಪಿಎ ಎಂದು ಬಿಂಬಿಸಿ ಮುಡಾದೊಂದಿಗೆ ವ್ಯವಹರಿಸಿ ಮುಡಾ ಸ್ವಾಧೀನಪಡಿಸಿಕೊಂಡ ಜಮೀನಿನ ಪರಿಹಾರ ಮೊತ್ತ ಸುಮಾರು 8,37,451 ರೂ. ಪಡೆಯುತ್ತಾರೆ.

ಇಲ್ಲಿಯ ತನಕ ಇದ್ಯಾವುದೂ ಜಮೀನಿನ ಮೂಲ ಮಾಲಿಕರಾದ ದೇವಕಿ ಮತ್ತು ಸುಬ್ರಹ್ಮಣ್ಯ ಅವರಿಗೆ ತಿಳಿಯುವುದಿಲ್ಲ. 74 ವರ್ಷದ ಸುಬ್ರಹ್ಮಣ್ಯ ಮತ್ತು 70 ವರ್ಷ ವೃದ್ಧರಾದ ದೇವಕಿ ಅವರು 2013 ರಲ್ಲಿ ಅವರು ಭಾರತಕ್ಕೆ ಬಂದು ಉಡುಪಿಯಲ್ಲಿ ನೆಲಸಿ ಆಗಾಗ್ಗೆ ಮೈಸೂರಿಗೆ ಬಂದು ತಮ್ಮ ಜಮೀನು ನೋಡಿಕೊಂಡು ಹೋಗುತ್ತಾರೆ. ಮುಡಾ ಸ್ವಾಧೀನ, ನಕಲಿ ಜಿಪಿಎ ಇದ್ಯಾವುದೂ ವೃದ್ಧ ದಂಪತಿ ಗಮನಕ್ಕೆ ಬಂದಿರುವುದಿಲ್ಲ.

2017ರಲ್ಲಿ ಪೊನ್ನಪ್ಪ ಮತ್ತು ಮುಡಾ ಅಧಿಕಾರಿಗಳಿಂದ ತಮಗೆ ವಂಚನೆ ಆಗಿರುವ ಬಗ್ಗೆ ಮಾಹಿತಿ ತಿಳಿದ ಸುಬ್ರಹ್ಮಣ್ಯ ಅವರು ಮಾಹಿತಿ ಹಕ್ಕಿನ ಮೂಲಕ ದಾಖಲೆ ಸಂಗ್ರಹಿಸಿ ನಕಲಿ ಜಿಪಿಎ ಎಂದು ಮುಡಾಕ್ಕೆ ದೂರು ನೀಡುತ್ತಾರೆ. ಆದರೇ ಈಗಾಗಲೇ ಪೊನ್ನಪ್ಪ ಜತೆ ಶಾಮೀಲಾಗಿರುವ ಮುಡಾ ಅಧಿಕಾರಿಗಳು ವೃದ್ಧ ದಂಪತಿ ಅರ್ಜಿಯ ಬಗ್ಗೆ ಯಾವುದೇ ಗಮನ ಹರಿಸದೆ ನಿರ್ಲಕ್ಷ್ಯ ತಾಳುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊನ್ನಪ್ಪ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಮುಡಾ ಆಯುಕ್ತರಿಗೂ ಪತ್ರ ಬರೆದು, ನಂತರ ಇವೆಲ್ಲವನ್ನು ಪತ್ರ ಮುಖೇನ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಾರೆ. ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಮುಡಾಕ್ಕೆ ಪತ್ರವೂ ಬರುತ್ತದೆ. ಇದ್ಯಾವುದನ್ನೂ ಪರಿಗಣಿಸದ ಮುಡಾ ಆಯುಕ್ತ ದಿನೇಶ್ ಅವರು 2023ರ ಜೂನ್ ತಿಂಗಳಲ್ಲಿ ತರಾತುರಿಯಾಗಿ ಹಗಲು-ರಾತ್ರಿ ಎರಡು ದಿನಗಳ ಕಾಲ ಇದೇ ವೃದ್ಧ ದಂಪತಿ ಜಮೀನಿನಲ್ಲಿ ರಸ್ತೆ ಡಾಂಬರೀಕರಣ ನಡೆಸಿ ಅದರಲ್ಲಿ 8 ಸೈಟುಗಳನ್ನು ಬೇರೆ ವ್ಯಕ್ತಿಗಳಿಗೆ ಹಂಚಿಕೆ ಮಾಡಿರುತ್ತಾರೆ.

ಇದನ್ನೂ ಓದಿ | Muda Scam: ಮುಡಾ ಹಗರಣದಲ್ಲಿ ಕಾನೂನು ಉಲ್ಲಂಘನೆ ಆಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ: ಬೊಮ್ಮಾಯಿ

ಈ ಎಲ್ಲ ಅವ್ಯವಹಾರಗಳಲ್ಲಿ ಪೊನ್ನಪ್ಪ ಜತೆ ಮುಡಾ ಅಧಿಕಾರಿಗಳೂ ಶಾಮೀಲಾಗಿದ್ದು, ಪೊನ್ನಪ್ಪ ನೀಡಿದ ನಕಲಿ ಜಿಪಿಎ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಮೀನು ಜಂಟಿ ಖಾತೆಯಲ್ಲಿದ್ದರೂ ಕೇವಲ ದೇವಕಿ ಅವರ ಒಂದೇ ಹೆಸರಲ್ಲಿನ ನಕಲಿ ಜಿಪಿಎ ಪರಿಗಣಿಸಿ ಅಕ್ರಮವಾಗಿ ಜಮೀನು ವಶಕ್ಕೆ ಪಡೆದು, ಜಮೀನಿನ ಮೂಲ ವಾರಸುದಾರರಾದ ನಮಗೆ ವಂಚನೆ ಮಾಡಿದ್ದಾರೆಂದು ಸುಬ್ರಹ್ಮಣ್ಯ ಅವರು ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಮತ್ತು ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.