ತುಮಕೂರು: ಮಾಧ್ಯಮಗಳು ಸತ್ಯವನ್ನು ಬಿತ್ತರಿಸಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಮಹಾನಗರ ಪಾಲಿಕೆ ಆವರಣದ ಟೌನ್‌ಕ್ಲಬ್‌ನ `ಸಮೃದ್ಧಿ ಸಭಾಂಗಣದಲ್ಲಿ ತುಮಕೂರು ವಾರ್ತೆ ಪತ್ರಿಕೆಯ 42ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಶಾಲಿನಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಕೆಲವು ಪತ್ರಕರ್ತರಿಗೆ ಸಾಂದರ್ಭಿಕ ಅಭಿವೃದ್ಧಿ ವಿಚಾರಗಳಿಗಿಂತ ಇನ್ನಾವುದೋ ಟೀಕೆ, ಆರೋಪಗಳಿಗೆ ಹೆಚ್ಚು ಆದ್ಯತೆ ನೀಡುವ ಮನಃಸ್ಥಿತಿ ಹೆಚ್ಚಾಗುತ್ತಿದೆ, ಎಲೆಕ್ಟ್ರಾನಿಕ್ ಮಾಧ್ಯಮವು ವಿಚಾರಗಳನ್ನ ವಿರೂಪಗೊಳಿಸಿ ದಿಢೀರ್ ಸುದ್ದಿ ಬಿತ್ತರಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ನನ್ನ ಅವಧಿಯಲ್ಲಿ ಒಳಪಟ್ಟು ಒಂದಷ್ಟು ಅಭಿವೃದ್ಧಿ ಕಾರ್ಯ ಗಳು ನಡೆದಿವೆ, ಕೆಲವೊಂದು ಅಭಿವೃದ್ಧಿ ತನ್ನದೇ ಆದ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ, ಅಭಿವೃದ್ಧಿ ಪ್ರಶ್ನಿಸುವ ಆತುರದಲ್ಲಿ ಟೀಕಿಸಬಾರದು, ಮತ್ತಷ್ಟು ಅಭಿವೃದ್ಧಿಗೆ ಉತ್ತೇಜನ ನೀಡುವಂತಿರಬೇಕು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ವೀಣಾ ಮಾತನಾಡಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಮಂದಿ ನಡುವೆ ಗುಣಮಟ್ಟದ ಸೇವೆ ಒದಗಿಸು ತ್ತಿದೆ. ಟ್ರಾಮಾ ಸೆಂಟರ್ ಸೇವೆಯೂ ಲಭ್ಯವಿದ್ದು ಇದೀಗ ಕೆಲ ಅಗತ್ಯತೆಗಳು ಪೂರೈಕೆಯಾಗಿರುವುದರಿಂದ ಮೂಲ ಉದ್ದೇಶದಂತೆ ಈ ಎರಡೂ ಸೇವೆ ಗಳನ್ನು ಆಯಾ ಆಸ್ಪತ್ರೆಯ ಕಟ್ಟಡಗಳಲ್ಲಿ ಪ್ರತ್ಯೇಕವಾಗಿ ಸೇವೆ ಒದಗಿಸಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮಾತನಾಡಿ, ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು ಸಮಗ್ರ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಜಾಗತಿಕ ಪರಿಹಾರ ಒದಗಿಸುವ ಸವಾಲಿನೊಂದಿಗೆ ದೇಶದ ಒಟ್ಟು 18 ನಗರಗಳ ಪಟ್ಟಿಯಲ್ಲಿ ತುಮಕೂರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದರು.
ಸಮಾರಂಭದಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಡಾ.ಪ್ರಕಾಶ್ ಕೆ.ನಾಡಿಗ್ ಮಾತನಾಡಿದರು. ಇದೇ ವೇಳೆ ಜಿಲ್ಲೆಯ ಹಲವು ಕವಿಗಳು ಕವಿಗೋಷ್ಠಿ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಬಯೋನೀಡ್ಸ್ ಎಂಡಿ ಡಾ.ವಿನಯ್‌ಬಾಬು, ಸಂಪಾದಕ ಎಸ್.ಸುರೇಶ್‌ವತ್ಸ, ಎಚ್.ಎ.ಭಾರತೀಶ್ , ಈಶ್ವರ್, ಪ್ರಸನ್ನ ದೊಡ್ಡಗುಣಿ, ಮಾರುತಿ ಇದ್ದರು.