ಬೆಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ, ಅದಕ್ಕಾಗಿ ಚಿಕಿತ್ಸೆ ಕೊಡಿಸಿದ್ದ ಬಾವನನ್ನೇ ಚಾಕುವಿನಿಂದ (Stabbing) ಇರಿದು ಕೊಂದ (Murder case) ಘಟನೆ ಬೆಂಗಳೂರಿನಲ್ಲಿ (Bangalore crime news) ನಡೆದಿದೆ.
ಬ್ಯಾಟರಾಯನಪುರದ ಸ್ಯಾಟ್ಲೈಟ್ ಬಸ್ ನಿಲ್ದಾಣದ ಬಳಿ ಈ ಅಕೃತ್ಯ ನಡೆದಿದೆ. ವೆಂಕಟಾಚಲಪತಿ (46) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಆರೋಪಿ ವಿಶ್ವನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಾಮೈದ ವಿಶ್ವನಾಥ್‌ಗೆ ಬಾವ ವೆಂಕಟಾಚಲಪತಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. 15 ದಿನಗಳ ಹಿಂದೆ ವಿಶ್ವನಾಥ್ಗಾಗಿ ವೆಂಕಟಾಚಲಪತಿ ಅವರು ಹೊಸಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆ ಸಹ ಮಾಡಿ ಇರಿಸಿದ್ದರು. ಇಷ್ಟೆಲ್ಲಾ ಸಹಾಯ ಮಾಡಿದ ಬಾವನನ್ನೇ ಈತ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ವೆಂಕಟಾಚಲಪತಿ ಟಿ.ಆರ್.ಮಿಲ್ ನಿವಾಸಿ. ಮತ್ತೊಂದೆಡೆ ಆರೋಪಿ ವಿಶ್ವನಾಥ್ನನ್ನು ಮಾತಾಡಿಸಲು ಮನೆಗೆ ಬಂದಿದ್ದ ಸಹೋದರಿಯ ಮೇಲೂ ವಿಶ್ವನಾಥ್ ದರ್ಪ ಮೆರೆದಿದ್ದಾನೆ. ಸಹೋದರಿಗೂ ಥಳಿಸಿ ಮನೆಯಿಂದ ಹೊರದಬ್ಬಿದ್ದಾನೆ. ಇದನ್ನು ಪ್ರಶ್ನಿಸಲು ವಿಶ್ವನಾಥ್ ಮನೆಗೆ ವೆಂಕಟಾಚಲಪತಿ ಬಂದಾಗ ಚಾಕುವಿನಿಂದ ಹಲ್ಲೆ ನಡೆಸಿ 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೈದ ನಂತರ ಮನೆ ಹೊರಗೆ ಚಾಕು ಹಿಡಿದು ಓಡಾಡುತ್ತ ಪಕ್ಕದ ಮನೆಯವರಿಗೆ ನಮ್ಮ ಬಾವನನ್ನು ಕೊಂದಿದ್ದೇನೆ ಎಂದು ಕಿರುಚಾಡಿದ್ದಾನೆ. ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಕೂಡಲೇ ಸ್ಥಳೀಯರು ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ವಿಶ್ವನಾಥ್ನನ್ನು ಬಂಧಿಸಿದ್ದಾರೆ. ವೆಂಕಟಾಚಲಪತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸುದ್ದಿ ಓದಿ: Road Accident: ಮಧುಗಿರಿ ಬಳಿ ಭೀಕರ ಅಪಘಾತ; ಎರಡು ಕಾರುಗಳು ಡಿಕ್ಕಿಯಾಗಿ ಐವರ ದುರ್ಮರಣ