ಮೈಸೂರು: ಮೈಸೂರು ದಸರಾ-2023ರ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದಿನಾಂಕ ಘೋಷಣೆ ಯಾಗಿದೆ. ಅಕ್ಟೋಬರ್ 24ರಂದು ಮಧ್ಯಾಹ್ನ ದಸರಾ ಮೆರವಣಿಗೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಈ ಕುರಿತಂತೆ ಮೈಸೂರು ದಸರಾ-2023ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಅ.24 ರ ವಿಜಯ ದಶಮಿಯಂದು ಮಧ್ಯಾಹ್ನ 1.46 ರಿಂದ 2.08 ರ ಮಕರ ಲಗ್ನದಲ್ಲಿ ಅರಮನೆ ಉತ್ತರ ದ್ವಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರುನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು.
ಸಂಜೆ 4.40 ರಿಂದ 5 ರವರೆಗಿನ ಶುಭ ಮೀನ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ವಿಶೇಷವೇದಿಕೆಯಲ್ಲಿ ನಿಂತು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸು ವರು. ಅ.15 ರಂದು ಬೆಳಗ್ಗೆ 10.15 ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ದಸರೆಗೆ ಚಾಲನೆ ನೀಡುವರು. ಅದೇ ದಿನ ಸಂಜೆ ಅರಮನೆಯಲ್ಲಿ ಪೂಜೆ ನಡೆಯಲಿದೆ.
ಅ. 16 ರಂದು ಬ್ರಹ್ಮಚಾರಿಣೀ, 17 ರಂದು ಚಂದ್ರಘಂಟಾ, 18 ರಂದು ಕೂಷ್ಮಾಂಡಾ, 19 ರಂದು ಸ್ಕಂದ ಮಾತಾ, 20 ರಂದು ಕ್ಯಾತಾಯಿನೀ- ಸರಸ್ವತಿಪೂಜೆ, 21 ರಂದು ಕಾಳರಾತ್ರಿ- ಮಹಿಷಾಸುರ ಸಂಹಾರ, 22 ರಂದು ದುರ್ಗಾಷ್ಟಮಿ- ಸಿದ್ಧಿ ರಾತ್ರಿ, 23 ರಂದು ಮಹಾನವಮಿ- ಆಯುಧಪೂಜೆ, ಗಜಾಗ್ವಾದಿ ಪೂಜೆ, ಹಯಗ್ರೀವ ಪೂಜೆ, ಅಮಲು ದೇವತಾ ಪೂಜೆ- ಮಹಾಗೌರಿ ಪೂಜೆ ನಡೆಯಲಿದೆ.
26 ರಂದು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ರಥೋತ್ಸವ ನಡೆಯಲಿದೆ.