ಮೈಸೂರು: ಎರಡು ಗುಂಪುಗಳ ನಡುವಿನ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯಕ್ (32) ಎಂದು ಗುರುತಿಸಲಾಗಿದೆ. ವೇಣುಗೋಪಾಲ್ ಯುವ ಬ್ರಿಗೇಡ್ನ ಕಾರ್ಯಕರ್ತ ಎಂದು ತಿಳಿದು ಬಂದಿದೆ.
ಶನಿವಾರ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿದ್ದ ಕೆಲವರು ಉಭಯ ಬಣಗಳನ್ನೂ ಸಮಾಧಾನ ಪಡಿಸಿದ್ದರು. ಇದಾದ ನಂತರ ಮತ್ತೆ ಗಲಾಟೆ ನಡೆದು ಓರ್ವನ ಕೊಲೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್ ಪಿ. ಗೋವಿಂದರಾಜು, ನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಮೃತದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾ ನಿಸಲಾಗಿದೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ನೂರಾರು ಯುವಕರು ಜಮಾಯಿಸಿದ್ದರು.
ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದರು. ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಒತ್ತಾಯಿಸಿದರು. ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.