Saturday, 14th December 2024

ಆಗಸ್ಟ್‌ 15ರೊಳಗೆ ಮೈಶುಗರ್‌ ಕಾರ್ಖಾನೆ ಪುನರಾರಂಭ

ಮಂಡ್ಯ: ಮಂಡ್ಯದ ಜನರ ಜೀವನಾಡಿಯಾಗಿದ್ದ ಮೈಶುಗರ್‌ ಕಾರ್ಖಾನೆ, ಆಗಸ್ಟ್‌ 15ರೊಳಗೆ ಕಬ್ಬು ಅರೆಯುವಿಕೆ ಪ್ರಕ್ರಿಯೆನ್ನು ಅಧಿಕೃತವಾಗಿ ಪ್ರಾರಂಭಿಸಲು ತೀರ್ಮಾನಿಸಿದೆ. ಇದೀಗ ಮಂಡಳಿ ಮತ್ತೆ ಮೈಶುಗರ್‌ ಆರಂಭ ಮಾಡಲು ಮುಂದಾಗಿದೆ.

ಕಳೆದ 4 ವರ್ಷಗಳಿಂದ ಕಬ್ಬು ಅರೆಯುವಿಕೆ ಕಾರ್ಯಾ ಚರಣೆ ಸ್ಥಗಿತಗೊಂಡಿತ್ತು.

ನಿತ್ಯ 3,500ರಿಂದ 4000 ಟನ್‌ವರೆಗೆ ಕಬ್ಬು ನುರಿಸುವಂತೆ ಬಿ-ಮಿಲ್‌ನ್ನು ಸಜ್ಜುಗೊಳಿಸಲಾಗಿದೆ. ಇದುವರೆಗೆ 4 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಇನ್ನಷ್ಟು ಕಬ್ಬು ಸಿಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರ ಮೈಷುಗರ್ ಕಾರ್ಯಾಚರಣೆ ಆರಂಭಿಸಲು ಇದುವರೆಗೆ 19.6 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಇದರಲ್ಲಿ 2.25 ಕೋಟಿ ರೂಪಾಯಿ ಹಣವನ್ನು ಕಾರ್ಮಿಕರ ವಿಆರ್‌ಎಸ್‌ಗೆ, 2.35 ಕೋಟಿ ರೂಪಾಯಿ ಹಣವನ್ನು ಕಬ್ಬು ಕಟಾವು ಮಾಡುವವರನ್ನು ಕರೆತರುವುದಕ್ಕಾಗಿ, ಉಳಿದ 15 ಕೋಟಿ ರೂಪಾಯಿ ಹಣವನ್ನು ಯಂತ್ರೋಪಕರಣಗಳ ದುರಸ್ತಿ ಕಾರ್ಯಕ್ಕೆ ಖರ್ಚು ಮಾಡಲಾಗಿದೆ. ಕಾರ್ಖಾನೆ ಆರಂಭಕ್ಕೆ ಇನ್ನೂ 10 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಸುಮಾರು 300 ಮಂದಿ ಕೆಲಸಗಾರರು 2 ತಿಂಗಳುಗಳ ಕಾಲ ಯಂತ್ರೋಪಕರಗಣಗಳ ದುರಸ್ತಿ ಮಾಡಿದ್ದಾರೆ.

ಮೈಷುಗರ್ ಕಾರ್ಯಾಚರಣೆಗೊಳಿಸಿದ್ದ ಸಮಯದಲ್ಲಿ ಅಲ್ಲಿನ ವ್ಯಾಪ್ತಿಯ ಕಬ್ಬನ್ನು ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೂ ಹಂಚಿಕೆ ಮಾಡಲಾಗಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಟನ್ ಕಬ್ಬು ಇದ್ದರೂ ಇದುವರೆಗೂ ಲಕ್ಷ ಟನ್ ಕಬ್ಬು ಮಾತ್ರ ಒಪ್ಪಂದ ಮಾಡಿಕೊಂಡು ಕಾರ್ಖಾನೆಗೆ ತರುವಂತೆ ತಿಳಿಸಲಾಗಿದೆ. ಉಳಿದ ಕಬ್ಬನ್ನು ರೈತರು ತಮಗಿಷ್ಟ ಬಂದ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆಗೆ ಸಿದ್ಧಗೊಂಡಿರುವುದರಿಂದ ರಾಜ್ಯ ಸರ್ಕಾರ ಖಾಸಗಿ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಲು ಮುಂದಾಗಬೇಕಿದೆ.