Saturday, 14th December 2024

ರಾಜಪ್ರಭುತ್ವ ಕೊನೆಗಣಿಸಿ ನಮ್ಮದೇ ಸಂವಿಧಾನ ಸಮರ್ಪಿಸಿಕೊಂಡ ದಿನವೇ ಗಣರಾಜ್ಯೋತ್ಸವ: ಉಸ್ತುವಾರಿ  ಸಚಿವ ಎನ್. ನಾಗರಾಜ್

ಚಿಕ್ಕಬಳ್ಳಾಪುರ: ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ ಸರ್ವರ ಸ್ವಾತಂತ್ರ‍್ಯ ಹಾಗೂ ಏಳ್ಗೆಯ ಅತ್ಯುತ್ತಮ ಸಂವಿಧಾನವನ್ನು ಒಪ್ಪಿಕೊಂಡು ಮುಂದುವರೆಯುತ್ತಿರುವ ಹೆಮ್ಮೆಯ ದೇಶ ನಮ್ಮ ಭಾರತ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು ಅವರು ತಿಳಿಸಿದರು.

ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ  ಇಂದು ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ ಜಿಲ್ಲಾ  ಕ್ರೀಡಾಂಗಣದಲ್ಲಿ ಹಮ್ಮಿ ಡಿದ್ದ ೭೪ ನೇ ಗಣ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಅವರು  ಮಾತ ನಾಡಿದರು.

ಭಾರತವು ಸ್ವಾತಂತ್ರ‍್ಯ ನಂತರ ೧೯೫೦ ರ ಜನವರಿ ೨೬ ರಂದು ತನ್ನದೇ ಸಂವಿಧಾನವನ್ನು ಜಾರಿಗೊಳಿಸಿ ಸ್ವತಂತ್ರ ಗಣತಂತ್ರ ರಾಷ್ಟ್ರವಾಯಿತು. ಇದರಿಂದಾಗಿ ಜನವರಿ ೨೬, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕು.ತಾಯ್ನಾಡಿನ ಸ್ವಾತಂತ್ರ‍್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ದೇಶ ಪ್ರೇಮಿಗಳು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸುತ್ತಾ ಅವರಿಗೊಂದು ಸಲಾಂ ಹೇಳಬೇಕು. ಸ್ವಾತಂತ್ರ‍್ಯ ಪಡೆದ ಸಂದರ್ಭದಲ್ಲಿ ಹರಿದು ಹಂಚಿಹೋಗಿದ್ದ ದೇಶವನ್ನು ಒಂದು ಗೂಡಿಸುವುದು, ಅನಕ್ಷರತೆ, ಅನಾರೋಗ್ಯ, ಹಸಿವು ಮತ್ತು ಬಡತನ ದಲ್ಲಿದ್ದ ದೇಶವನ್ನು ಮುನ್ನಡೆಸಿದ ನಾಯಕರನ್ನು ನಾವು ಗೌರವಿಸೋಣ ಎಂದರು.

ಜಗತ್ತಿಗೆ ಮಾತೃಪ್ರೇಮ,ನಾಗರೀಕ ಪ್ರಜ್ಞೆ, ಸಮತೆ ಮತ್ತು ಮಮತೆಯನ್ನು ಬೋಧಿಸಿದ ಪರಂಪರೆ ನಮಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಪ್ರಜೆಗಳೇ ಪ್ರಭು ಗಳು ಎಂದು ಭಾವಿಸಿ ಹಲವು ಧರ್ಮಾಚರಣೆಗಳನ್ನು ಒಂದೇ ಮಣ್ಣಿನಲ್ಲಿ ಪೋಷಿಸು ತ್ತಿರುವ ದೇಶ ನಮ್ಮದು. ಇಂತಹ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಜನಪರಂಪರೆಯನ್ನು ಧೀರ್ಘಕಾಲ ಉಳಿಸಿ ಬೆಳಸಿಕೊಂಡು ಬಾಳಲು ನಮ್ಮ ಸಂವಿಧಾನ ದಾರಿ ದೀಪವಾಗಿದೆ ಎಂದು ಹೇಳಿದರು.

ಭಾರತ ಸಂವಿಧಾನವೇ ಶಕ್ತಿ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿ ಕೊಟ್ಟು ದೇಶದ ಮುನ್ನಡೆಗೆ ದಾರಿದೀಪ ನೀಡಿರುವ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜ್ಞಾನ ಮತ್ತು ಕೊಡುಗೆಯನ್ನು ಸದಾ ಸ್ಮರಿಸೋಣ. ನಮ್ಮ ಸಂವಿಧಾನವು ಸ್ವಾತಂತ್ರ‍್ಯ, ಸಮಾನತೆ, ಸಹೋದರತೆ, ಜಾತ್ಯತೀತತೆ, ಸಮಾಜವಾದ ಮತ್ತು ಸಾಮಾಜಿಕ ನ್ಯಾಯಗಳನ್ನು ಎತ್ತಿಹಿಡಿದಿದೆ. ವ್ಯಕ್ತಿ ಗೌರವದೊಂದಿಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸುಭದ್ರತೆಯನ್ನು ಸಾಧಿಸಲು ವಿಶೇಷ ಮಹತ್ವ ನೀಡಿದ್ದು ಇದನ್ನು ಎಲ್ಲರೂ ಪಾಲಿಸೋಣ ಎಂದು ಕರೆ ನೀಡಿದರು.

ಇನ್ನೂ ಸಹ ಕೊಟ್ಯಾಂತರ ಭಾರತೀಯರು ಅನಕ್ಷರತೆ, ಬಡತನ, ಅನಾರೋಗ್ಯ, ಅಸಮಾನತೆ ಹಾಗೂ ತಾರತಮ್ಯಗಳಲ್ಲಿ ಬಳಲುತ್ತಿದ್ದಾರೆ. ಶ್ರೀ ಸಾಮಾನ್ಯರಿಗೆ ಉತ್ತಮ ಶಿಕ್ಷಣ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯೋಗವನ್ನು ಒದಗಿಸಬೇಕು ಮತ್ತು ಅಭಿವೃದ್ಧಿಯನ್ನು ಜನಪರವಾಗಿಸಬೇಕು. ದೇಶದ ಬೆನ್ನೆಲುಬಾಗಿರುವ ಕೃಷಿ ಮತ್ತು ಕೃಷಿಕರನ್ನು ಸುಸ್ಥಿರ ಗೊಳಿಸಬೇಕೆಂಬ ಆಶಯದಿಂದ ನಮ್ಮ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಇಲಾಖೆಗಳಿಗೂ ಸಮಾನ ಅವಕಾಶ ನೀಡಿದ್ದು ಜಿಲ್ಲೆಯ ಎಲ್ಲಾ ಜನತೆಯನ್ನು ಒಂದಲ್ಲ ಒಂದು ರೀತಿ ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗುತ್ತಿರುವುದು ಸಂತಸದ ವಿಷಯವಾಗಿದೆ. ಈ ರೀತಿಯ ವಾತಾವರಣ ಸೃಷ್ಟಿಸಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಸಚಿವರು, ಗಣ್ಯರು  ಪುಷ್ಪನಮನ ಸಲ್ಲಿಸಿದರು.

ಸಶಸ್ತ್ರ ಪೊಲೀಸ್ ಮೀಸಲು ಪಡೆ,ನಾಗರೀಕ ಪೊಲೀಸ್ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕದಳ,ಅರಣ್ಯ ಇಲಾಖೆ, ಎನ್.ಸಿ.ಸಿ ತಂಡಗಳು ಚಿಕ್ಕಬಳ್ಳಾಪುರ ನಗರದ ಪಂಚಗಿರಿ  ಬೋಧನಾ  ಶಾಲೆ,ಪೂರ್ಣ  ಪ್ರಜ್ಞಾ  ಶಾಲೆಯ ಬಾಲಕಿಯರ  ತಂಡ ಸೇರಿದಂತೆ ಒಟ್ಟು ೧೭ ತಂಡಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ಚಿಕ್ಕಬಳ್ಳಾಪುರ ನಗರದ ಸರ್ಕಾರಿ  ಪ್ರೌಢ ಶಾಲೆ,ಬ್ರೈಟ್  ಶಾಲೆ, ಭಾರತಿ ಶಾಲೆ  ಹಾಗೂ  ಚಿಂತಾಮಣಿಯ ಏನಿಗದೆಲೆಯ ಜೆ.ಎನ್.ವಿ  ಪ್ರೌಢ  ಶಾಲೆಯ ವಿದ್ಯಾರ್ಥಿಗಳ ತಂಡಗಳು ಸಾಂಸ್ಕ್ರತಿಕ ನೃತ್ಯಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆ  ಪಡೆದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿಯ ಅಧ್ಯಕ್ಷರಾದ ಕೆ.ವಿ.ನಾಗರಾಜು, ಬಿ.ಎಂ.ಟಿ.ಸಿ  ಉಪಾಧ್ಯಕ್ಷ ನವೀನ್  ಕಿರಣ್, ನಗರಸಭೆ ಅಧ್ಯಕ್ಷರಾದ ಡಿ.ಎಸ್.ಆನಂದ ರೆಡ್ಡಿ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ  ಡಾ.ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಹಾಜರಿದ್ದರು.