Friday, 25th October 2024

ಕೈಯಲ್ಲಿ ಹಿಡಿದಿದ್ದ ನಾಡ ಬಾಂಬ್‌ ಸ್ಫೋಟ: ಎರಡು ಬೆರಳು ಛಿದ್ರ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ನೇರಳೆಹಳ್ಳಿ ದೊಡ್ಡಿ ಗ್ರಾಮದಲ್ಲಿ ತೆಂಗಿನಕಾಯಿ ಎಂದುಕೊಂಡು ಕೈಯಲ್ಲಿ ಹಿಡಿದಿದ್ದ ನಾಡ ಬಾಂಬ್‌ ಸ್ಫೋಟ ಗೊಂಡಿದ್ದಾರೆ.

ಕೋಲಾರದ ಮೂಲದ ನಿವಾಸಿ ಕೌಶದ್ (25) ನೇರಳೆಹಳ್ಳಿ ದೊಡ್ಡಿ ಗ್ರಾಮದ ಅಕ್ಕಿ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಕ್ಕಿಯ ಮೇಲೆ ತೆಂಗಿನಕಾಯಿ ಯಂತಹ ವಸ್ತುವು ಬಿದ್ದಿತ್ತು. ಇದನ್ನು ಗಮನಿಸಿದ ಕೌಶದ್ ಆ ವಸ್ತುವನ್ನು ಕೈಯಲ್ಲಿ ಹಿಡಿದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಇನ್ನು ಕೌಶಿದ್‌ ವಸ್ತುವನ್ನು ಏನೆಂದು ತಿಳಿಯಲು ಚಚ್ಚಿದ್ದಾರೆ ಎನ್ನಲಾಗಿದೆ. ಸ್ಫೋಟಗೊಂಡ ಬಳಿಕ ನಾಡ ಬಾಂಬ್‌ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಕೌಶದ್ ಕೈಗೆ ಗಂಭೀರ ಗಾಯವಾಗಿದೆ. ಸ್ಫೋಟದ ರಭಸಕ್ಕೆ ಕೌಶದ್ ಬಲಗೈ ಹಸ್ತದ ಎರಡು ಬೆರಳು ಛಿದ್ರ ಛಿದ್ರವಾಗಿದೆ. ಸದ್ಯ ಕೌಶದ್ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.