ತುಮಕೂರು: ಅಕ್ರಮಗಳ ಬೀಡಾಗಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ,ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು ಉಂಟು ಮಾಡುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ.ಯತಿರಾಜು ಒತ್ತಾಯಿಸಿ ದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗುಣಮಟ್ಟದ ಕೊಬ್ಬರಿ ಖರೀದಿ ಹೆಸರಿನಲ್ಲಿ ರೈತರನ್ನು ಸಾಕಷ್ಟು ಶೋಷಣೆಗೆ ಒಳಪಡಿಸಲಾಗುತ್ತಿದೆ. 75ಎಂಎಂ ಗಿಂತ ಕಡಿಮೆ ಇರುವ ಒಳ್ಳೆಯ ಗುಣಮಟ್ಟದ ಕೊಬ್ಬರಿ ಖರೀದಿಸುತ್ತಿಲ್ಲ.ಅಲ್ಲದೆ ಮಿಶ್ರ ಬೆಳೆ ಬೆಳೆದ ರೈತರು ತಂದ ಕೊಬ್ಬರಿ,ಪಹಣ ಯಲ್ಲಿ ಬೆಳೆ ನಮೂದಾಗದ ರೈತರ ಕೊಬ್ಬರಿಯನ್ನು ತಿರಸ್ಕರಿಸುವ ಮೂಲಕ ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತಿದ್ದಾರೆ ಎಂದರು.
ಚಿಂತಕ ಕೆ.ದೊರೆರಾಜು ಮಾತನಾಡಿ,ಚುನಾವಣೆ ನಂತರ ಜಿಲ್ಲಾಡಳಿತ ಜನರ ಸಮಸ್ಯೆಗಳ ಪರಿಹಾರದತ್ತ ಗಮನಹರಿಸ ಬೇಕಾಗಿದೆ.ಮೈಕ್ರೋ ಫೈನಾನ್ಸ್ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ.ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಕುಡಿಯುವ ನೀರಿನ ಯೋಜನೆಗಳ ಪ್ರಗತಿಯಲ್ಲಿದ್ದರೂ ಅದು ಅಂಚಿನ ಜನರಿಗೆ ತಲುಪುತ್ತಿಲ್ಲ.ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು.ಶಾಲಾ,ಕಾಲೇಜುಗಳು ಪುನರಾರಂಭವಾಗುವ ಕಾಲದಲ್ಲಿ ಶುಲ್ಕುಗಳು ತೀವ್ರವಾಗಿ ಹೆಚ್ಚಿದ್ದು, ಖಾಸಗೀ ಶಾಲೆಗಳ ಈ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ನಾಗೇಶ್ ಮಾತನಾಡಿ,ನಾಫೆಡ್ ಖರೀದಿ ಕೇಂದ್ರದ ಮೂಲಕ ಕೊಂಡ ಕೊಬ್ಬರಿಗೆ ಮೂರು ದಿನದಲ್ಲಿ ರೈತನ ಖಾತೆಗೆ ಹಣ ವರ್ಗಾವಣೆ ಮಾಡಬೇಕು.ಜಿಲ್ಲೆಯಲ್ಲಿ ಏ.01 ರಿಂದ ಕೊಬ್ಬರಿ ಖರೀದಿ ಆರಂಭವಾಗಿದ್ದು ಏ.13ರವರಗೆ ಮಾತ್ರ ಕೇಂದ್ರ ಸರಕಾರದ ಎಂ.ಎಸ್.ಪಿ. ಹಣ ಬಂದಿದೆ.ಆ ನಂತರದಿAದ ಇದುವರೆಗೂ ಖರೀದಿಯಾದ ಕೊಬ್ಬರಿಗೆ ಹಣ ಬಂದಿಲ್ಲ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ರಾಜ್ಯರೈತ ಸಂಘದ ತಿಪಟೂರು ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಕಂಬೇಗೌಡ,ಸೈಯದ್ ಮುಜೀವ್, ರೈತ ಸಂಘದ ದೇವರಾಜು, ಚನ್ನಬಸಣ್ಣ, ಅಜ್ಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.