Tuesday, 10th September 2024

ಮತ್ತೆ 5 ದಿನ ಇಡಿ ಕಸ್ಟಡಿಗೆ ಮಾಜಿ ಸಚಿವ ನಾಗೇಂದ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ನಾಗೇಂದ್ರ ಅವರನ್ನ ಮತ್ತೆ 5 ದಿನ ಇಡಿ ಕಸ್ಟಡಿಗೆ ನೀಡಿ 82ನೇ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ವರ್ಗಾವಣೆಯಾಗಿದ್ದ ಹಣ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ಈ ಬಗ್ಗೆ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ಮತ್ತು ನಾಗೇಂದ್ರ ನಿವಾಸದಲ್ಲಿ ಮಹತ್ವದ ದಾಖಲೆಗಳ ಪತ್ತೆಯಾಗಿವೆ ಎಂದು ಇಡಿ ಪ್ರಕಟಣೆ ಮೂಲಕ ತಿಳಿಸಿದೆ. ಈ ಎಲ್ಲಾ ಅಂಶಗಳನ್ನು ಇಡಿ, ಕೋರ್ಟ್​ ಗಮನಕ್ಕೆ ತಂದು ಮತ್ತೆ ತನ್ನ ಕಸ್ಟಡಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಾಗೇಂದ್ರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು. ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸರ್ಚಿಂಗ್ ಮುಗಿದಿದೆ. ಸೀಜಿಂಗ್ ಕಾರ್ಯ ಮುಗಿದಿದೆ. ಆರೋಪಿಯ ವಿಚಾರಣೆಯೂ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇಡಿ ಅಧಿಕಾರಿಗಳು ಪೊಲೀಸರಲ್ಲ. ಅವರನ್ನು ಕಸ್ಟಡಿಗೆ ಪಡೆದ ಉದ್ದೇಶ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡೋದೇನಿದೆ? ಎಂದು ಪ್ರಶ್ನಿಸಿದ ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್‌, ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿದರು.

ಈ ವೇಳೆ ಇಡಿ ಪರ ವಕೀಲ ಪ್ರಸನ್ನಕುಮಾರ್, ಇನ್ನೂ ವಿಚಾರಣೆ ಬಾಕಿ ಇರುವುದರಿಂದ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದರೆ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನ್ಯಾಯಾಲಯ ಆದೇಶಿಸಿತು. 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಇ.ಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದರು.

ವಾಲ್ಮೀಕಿ ಹಗರಣ ಸಂಬಂಧ ನಾಲ್ಕು ರಾಜ್ಯಗಳ 23 ಕಡೆ ದಾಳಿ ನಡೆಸಿದ್ದೇವೆ. 18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, ನಂತರ ಹಲವು ನಕಲಿ ಖಾತೆಗಳಿಗೆ ಹೋಗಿ ಹಣವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *