Thursday, 21st November 2024

Bheemanakatte Mutt: ನಂದಿನಿ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ

ತುಮಕೂರು: ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವುದು ಸುಲಭ, ಆದರೆ ನಿರ್ವಹಣೆ ಬಹಳ ಕಷ್ಟ. ಅದರಲ್ಲೂ ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಜವಾಬ್ದಾರಿಯುತವಾಗಿ ಮುನ್ನಡೆಯುವುದು ಹಾಗೂ ಉತ್ತರದಾಯಿತ್ವ ಹೊಂದಿರುವುದು ಅತ್ಯಗತ್ಯ ಮತ್ತು ಅನಿವಾರ್ಯ ಎಂದು ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.

ಅವರು ತುಮಕೂರಿನ ಚಿಕ್ಕಪೇಟೆಯ ಪಂಚಾಂಗದ ಬೀದಿಯಲ್ಲಿರುವ ಶ್ರೀನಿವಾಸ ಪ್ರಾರ್ಥನಾ ಮಂದಿರದಲ್ಲಿ ಏರ್ಪಟ್ಟಿದ್ದ ತುಮಕೂರು ನಂದಿನಿ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಸಹಕಾರ ಸಂಘಗಳು ಗ್ರಾಹಕ ಸ್ನೇಹಿಯಾಗಿರಬೇಕು. ಗ್ರಾಹಕರೊಂದಿಗೆ ಉತ್ತಮ ಒಡನಾಟ, ಸಂಪರ್ಕ, ಉತ್ತಮ ನಡವಳಿಕೆ ಹೊಂದಿರಬೇಕು. ಅತಿಯಾದ ಲಾಭದ ಆಸೆಯನ್ನು ಬಿಡಬೇಕು. ಚಿಕ್ಕ ಸಂಸ್ಥೆಯಾದರೂ ಸ್ವಚ್ಚವಾ ಗಿರುವುದು ಅತಿ ಮುಖ್ಯ ಎಂದು ಸೂಚ್ಯವಾಗಿ ಹೇಳಿದ ಶ್ರೀಪಾದಂಗಳು, ಅಸೂಯೆ, ದುರಾಸೆ, ಸ್ವಾರ್ಥ, ದುರಹಂಕಾರ ಪತನಕ್ಕೆ ನಾಂದಿಯಾಗುತ್ತದೆ ಎಂದು ಹಲವು ನಿದರ್ಶನಗಳೊಂದಿಗೆ ವಿವರಿಸಿದರು.

ಸಂಘದ ಅಧ್ಯಕ್ಷ ಹೆಚ್.ಕೆ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಪ್ರಾರಂಭ ಹಾಗೂ ನಡೆದು ಬಂದ ಹಾದಿಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಘದ ಪ್ರಾರಂಭದಿಂದಲೂ ವಿವಿಧ ರೀತಿಯಲ್ಲಿ ಬೆನ್ನೆಲುಬಾಗಿ ನಿಂತು ಸಹಕರಿಸಿದ ಎಲೆಕ್ಟಿçಕಲ್ ಕಂಟ್ರಾಕ್ಟರ್ ಹೆಚ್.ಕೆ.ವೇಣುಗೋಪಾಲ್, ಅಚ್ಚಮ್ಮ, ಟಿ.ಎಸ್.ಶೀಲವತಿ, ಅಶ್ವತ್ಥನಾರಾಯಣಶಾಸ್ತಿç, ವೆಂಕಟರಾಮು, ಶ್ರೀನಿವಾಸಜೋಯಿಸ್, ರಾಜಾರಾವ್ ಅವರನ್ನು ಶ್ರೀಪಾದಂಗಳು ಗೌರವಿಸಿದರು. ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಹೆಬ್ಬಳಲು ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿದ್ದರು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಶ್ರೀನಿವಾಸ ಜೋಯಿಸ್ ಸ್ವಾಗತಿಸಿದರು. ರೂಪನಾಗೇಂದ್ರ ನಿರೂಪಿಸಿದರು. ಸಮಾರಂಭದಲ್ಲಿ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.