Monday, 9th December 2024

ನಫೇಡ್ ಮೂಲಕ ಕೊಬ್ಬರಿ ಖರೀದಿ ವಿಳಂಬ: ರಾಷ್ಟ್ರೀಯ ಹೆದ್ದಾರಿ ಬಂದ್ ಯಶಸ್ವಿ

ತಿಪಟೂರು ನಾಗರೀಕ ಹೋರಾಟ ಸಮಿತಿಯಿಂದ ಹೋರಾಟ: ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಭೇಟಿ

ತಿಪಟೂರು: ಮಾರುಕಟ್ಟೆಯಲ್ಲಿ ನಿರಂತರವಾಗಿ ಕೊಬ್ಬರಿ ಬೆಲೆ ಕುಸಿಯುತ್ತಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಕ್ವಿಂಟಲ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ರೂ.೧೧,೭೫೦ ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಟೆಂಡರ್ ಆಗುತ್ತಿದ್ದರೂ ನಫೆಡ್‌ನಿಂದ ಖರೀದಿ ಪ್ರಾರಂಭಿಸದೆ ರೈತರಿಗೆ ಅನ್ಯಾಯ ವಾಗುತ್ತಿರುವುದನ್ನು ಖಂಡಿಸಿ ತಿಪಟೂರು ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲೋಕೇಶ್ವರ ನೇತೃತ್ವದಲ್ಲಿ ಕೆ.ಬಿ. ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನೆಡಸಲಾಯಿತು.

ಸರ್ಕಾರದ ಗಮನ ಸೆಳೆಯಲು ತಿಪಟೂರು ನಾಗರೀಕ ಹೋರಾಟ ಸಮಿತಿಯಿಂದ ಕೆ.ಬಿ.ಕ್ರಾಸ್ ನಲ್ಲಿ (ಬೆಂಗಳೂರು – ಹೊನ್ನಾವರ ಹಾಗೂ ಬೀದರ್ – ಮೈಸೂರುಗಳಲ್ಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ) ಬೆಳಗ್ಗೆ ೧೦.೩೦ ರಿಂದ ೧೨ ಗಂಟೆವರೆಗೆ ಹೆದ್ದಾರಿ ಬಂದ್ ಮಾಡಿ ರೈತ ಪರ ಹೋರಾಟ ಗಾರರು ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದರು.

ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷರಾದ ಲೋಕೇಶ್ವರ್ ಮಾತನಾಡಿ ಕಳೆದ ನಾಲ್ಕು ತಿಂಗಳಿAದ ಕೊಬ್ಬರಿ ಬೆಲೆಯು ನಿರಂತರವಾಗಿ ಕಡಿಮೆಯಾಗಿ ರೂ.೧೦,೮೦೦ ಕ್ಕೆ ಬಂದಿದ್ದು, ಈ ಹಿಂದೆ ತಿಪಟೂರು, ಅರಸೀಕೆರೆ,ಗುಬ್ಬಿ, ತುರುವೇ ಕೆರೆ, ಹುಳಿಯಾರಿನಲ್ಲಿ ಬಂದ್ ಮಾಡಿ ಸರ್ಕಾರಕ್ಕೆ ಎಚ್ಚರಿಸಲಾಗಿದೆ. ಈ ಪರಿಣಾಮವಾಗಿ ಸರ್ಕಾರವು ಈ ಹಿಂದೆ ಇದ್ದ ಕ್ವಿಂಟಲ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ರೂ.೧೧,೦೦೦ ದಿಂದ ರೂ.೧೧,೭೫೦ ಕ್ಕೆ ಏರಿಕೆ ಮಾಡಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶ್ರೀಗುರು ಸಿದ್ದರಾಮೇಶ್ವರ ಜಯಂತಿಯಲ್ಲಿ ಶ್ರೀರ್ಘದಲ್ಲಿಯೇ ನಫೇಡ್ ಮೂಲಕ ಕೊಬ್ಬರಿ ಖರೀದಿ ಪ್ರಾರಂಭ ಮಾಡಲಾಗುವುದೆಂದು ತಿಳಿಸಿ ಹತ್ತು ದಿನಗಳಾದರೂ ಯಾವ ಪ್ರಯೋಜನವು ಇಲ್ಲದಾಗಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಮಂತ್ರಿಗಳಿ ದ್ದಾರೆ. ಗೃಹ ಸಚಿವರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಬಿಜೆಪಿಯ ಸಂಸದರು ಹಾಗೂ ಶಾಸಕರಿದ್ದರೂ ಕಲ್ಪತರು ನಾಡಿನಲ್ಲಿ ರೈತರಿಗೆ ಯಾವುದೇ ಸ್ಪಂದನೆ ಸಿಗದೇ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರವು ಈ ಕೂಡಲೇ ನಫೆಡ್ ಮೂಲಕ ಕೊಬ್ಬರಿ ಖರೀದಿ ಪ್ರಾರಂಭಿಸಬೇಕು ಹಾಗೂ ರಾಜ್ಯ ಸರ್ಕಾರವು ಪ್ರೋತ್ಸಾಹ ಧನವಾಗಿ ಕ್ವಿಂಟಾಲ್ ಕೊಬರಿಗೆ ರೂ.೩,೦೦೦ ವನ್ನು ಕೊಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಕುಂದೂರು ತಿಮ್ಮಯ್ಯ ಮಾತನಾಡಿ ರೈತರ ಜೀವನವು ದುಸ್ಥಿತಿಯಲ್ಲಿದ್ದು ಆತಂಕದ ಜೀವನ ನಡೆಸುತ್ತಿದ್ದಾರೆ. ಶಾಸಕರು ಹಾಗೂ ಸಚಿವರು ನಫೇಡ್ ನಿಂದ ಕೊಬ್ಬರಿ ಖರೀದಿ ಪ್ರಾರಂಭಿಸಿದೇ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದರು. ರೈತ ವಿರೋಧಿ ಸರ್ಕಾರವೆಂದು ನಿರೂಪಿಸುತ್ತಿದ್ದಾರೆ. ಇವತ್ತಿನ ಹೆದ್ದಾರಿ ರಸ್ತೆ ತಡೆ ಪ್ರತಿಭಟನೆಯು ಕೇವಲ ಸಾಂಕೇತಿಕವಾಗಿದ್ದು, ಸರ್ಕಾರವು ಈ ಕೂಡಲೇ ಸ್ಪಂದಿಸದಿದ್ದರೆ, ಮುಂದೆ ಕಾನೂನು ಉಲ್ಲಂಘಿಸುವ ಜೈಲ್ ಬರೋ ಚಳುವಳಿಯಾಗಿ ತೀವ್ರವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ತಿಪಟೂರು ತಾಲ್ಲೂಕು ತಹಶೀಲ್ದಾರ್ ಚಂದ್ರಶೇಖರ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಶೀಘ್ರವೇ ನಫೇಡ್ ಮೂಲಕ ಕೊಬ್ಬರಿ ಖರೀದಿ ಪ್ರಾರಂಭಿಸಲಾಗುವುದು. ರೈತರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ರೈತರಿಗೆ ಭರವಸೆ ನೀಡಿದಾಗ, ಫೆಬ್ರವರಿ ೨ನೇ ತಾರೀಖಿನೊಳಗೆ ನಫೆಡ್ ನಿಂದ ಕೊಬ್ಬರಿ ಖರೀದಿ ಪ್ರಾರಂಭಿಸಬೇಕು ಇಲ್ಲದಿದ್ದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿ ಹೆದ್ದಾರಿ ರಸ್ತೆ ತಡೆ ಮಾಡಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತೆರೆವು ಮಾಡಿದರು.