Thursday, 12th December 2024

ಅವಿಷ್ಕೃತ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮೂಡಲಗಿ ವಲಯಕ್ಕೆ ರಾಷ್ಟ್ರೀಯ ಪುರಸ್ಕಾರ

ಮೂಡಲಗಿ: 2020-21 ಮತ್ತು 2021-22ರ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವಿಷ್ಕøತ ಶೈಕ್ಷಣಿಕ ಚಟುವಟಿಕೆಗಳು ಮತ್ತು ಉತ್ತಮ ಶೈಕ್ಷಣಿಕ ಪ್ರಯೋಗಗಳನ್ನು ಶಾಲಾ ಹಂತದಲ್ಲಿ ಮಾಡಿರುವ ಸಾಧನೆಗಳಿಗಾಗಿ ವಲಯ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಹಂತದ ಶಿಕ್ಷಣಾಧಿಕಾರಿಗಳಿಗೆ ನೀಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಮೂಡಲಗಿ ವಲಯ ಪಾತ್ರವಾಗಿದೆ.
ಮಂಗಳವಾರದಂದು ದೆಹಲಿಯ ಡಾ. ಬಿ.ಆರ್. ಅಂಬೇಡ್ಕರ ಅಂತರಾಷ್ಟ್ರೀಯ ಭೀಮ ಭವನದಲ್ಲಿ ಈ ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರು ಮೂಡಲಗಿ ಬಿಇಓ ಎ.ಸಿ. ಮನ್ನಿಕೇರಿ ಅವರಿಗೆ ಪ್ರಧಾನ ಮಾಡಿದರು.
ದೇಶ ವ್ಯಾಪ್ತಿಯ ಜಿಲ್ಲಾ ಹಂತದ ಶಿಕ್ಷಣಾಧಿಕಾರಿಗಳು ಮತ್ತು ವಲಯ ಶಿಕ್ಷಣಾಧಿಕಾರಿಗಳಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 10 ಸಾವಿರ ರೂ.ಗಳ ನಗದು ಪುರಸ್ಕಾರವನ್ನು ಈ ಪ್ರಶಸ್ತಿಯು ಹೊಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಹಾಗೂ ಆಡಳಿತ ನೋಡಿ ಕೊಳ್ಳುತ್ತಿರುವ ರಾಷ್ಟ್ರೀಯ ಸಂಸ್ಥೆಯಾದ ನೀಪಾ ದಿಂದ ನೀಡಲಾಗುತ್ತಿದೆ.
ಕಳೆದ 10 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಿರುವುದು ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡಿರುವುದಕ್ಕೆ ಈ ಬಾರಿಯೂ ಮತ್ತೇ ಡಲಗಿ ವಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜೀವಕುಮಾರ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳ ವರೆಗೆ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೇಶದ 65 ಜನ ಜಿಲ್ಲಾ, ವಲಯ ಶಿಕ್ಷಣಾಧಿಕಾರಿಗಳು ಭಾಗಿಯಾಗಿದ್ದರು. ಇದರಲ್ಲಿ ಕರ್ನಾಟಕದಿಂದ 6 ಜನರು ಭಾಗಿಯಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿಯ ಆರಂಭದ ವರ್ಷವೇ 2013-14 ರಲ್ಲಿ ಮೂಡಲಗಿ ಶೈಕ್ಷಣಿಕ ವಲಯವು ಈ ಪ್ರಶಸ್ತಿಗೆ ಪಾತ್ರವಾಗಿದ್ದು, ಅಂದಿನ ಮಾನವ ಅಭಿವೃದ್ಧಿ ಸಚಿವೆ ಸ್ಮೃತಿ ಇರಾಣಿ ಅವರು ಮನ್ನಿಕೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಸ್ಮರಿಸಬಹುದು.
*
ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೇ ರಾಷ್ಟ್ರೀಯ ಪುರಸ್ಕಾರ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅರಭಾವಿ ಕ್ಷೇತ್ರದ ಶಾಸಕನಾದ ನಂತರ ಇಲ್ಲಿಯವರೆಗೂ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತ ಬಂದಿದ್ದೇನೆ. ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಶ್ರಮಿಸುತ್ತಿದ್ದೇವೆ. ಶಿಕ್ಷಣವೊಂದೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಈ ದಿಸೆಯಲ್ಲಿ ನಮ್ಮ ವಲಯವು ಪ್ರತಿ ವರ್ಷ ಉತ್ತಮ ಸಾಧನೆಗಳನ್ನು ಮಾಡುತ್ತ, ಹಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಚುತ್ತ ಬಂದಿರುವುದು ಶ್ಲಾಘನೀಯವಾಗಿದೆ. ಅದಕ್ಕಾಗಿ ಬಿಇಓ ಅಜೀತ ಮನ್ನಿಕೇರಿ ಮತ್ತು ಅವರ ತಂಡಕ್ಕೆ ನನ್ನ ಅಭಿನಂದನೆ ಗಳು.
      -ಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ
ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಅನುಷ್ಠಾನದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣಕ್ಕಾಗಿ ನಿರಂತರ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮೂಡಲಗಿ ವಲಯವು ಎರಡು ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಬಾಜನವಾಗುವಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ವಲಯದ ಶಿಕ್ಷಕರ ಶ್ರಮವೂ ಅವಿರತವಾಗಿದೆ.
-ಅಜೀತ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮೂಡಲಗಿ