Thursday, 12th December 2024

Naveen Kiran: ವಿಧಾನಪರಿಷತ್ ಸದಸ್ಯರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸುವುದು ಅಕ್ರಮ ಅನೈತಿಕ : ನವೀನ್‌ಕಿರಣ್ ಆಕ್ರೋಶ

ಚಿಕ್ಕಬಳ್ಳಾಪುರ : ಸೆ.೧೨ರಂದು ನಡೆಯುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ವಪಕ್ಷದ ಸದಸ್ಯರನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಶಾಸಕ ಮತ್ತು ಉಸ್ತುವಾರಿ ಸಚಿವರು ಅಡ್ಡದಾರಿಯ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಮತದಾರರ ಪಟ್ಟಿಗೆ ಸ್ಥಳೀಯರಲ್ಲದ,ಇಲ್ಲಿ ಒಂದು ದಿನವೂ ವಾಸಿಸದ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಲು ಕೈಜೋಡಿಸಿರುವ ಬಿಎಲ್‌ಒ ಸೇರಿ ಎಲ್ಲಾ ಅಧಿಕಾರಿಗಳ ನಡೆಯನ್ನು ಸುಪ್ರಿಂಕೋರ್ಟಿನವರೆಗೆ ತೆಗೆದುಕೊಂಡು ಹೋಗಿಯಾದರೂ ಸರಿ ತಪ್ಪಿತಸ್ಥರಿಗೆ ಶಿಕ್ಷೆಕೊಡಿಸುತ್ತೇವೆ ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ನವೀನ್‌ಕಿರಣ್ ಎಚ್ಚರಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸಂಜೆ ನಡೆಸಿದ ದಿಢೀರ್ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನನಗೆ ಗೊತ್ತಿರುವ ಕಾನೂನಿನಂತೆ ನಗರಸಭೆ ಚುನಾವಣೆಯಲ್ಲಿ ಮತಚಲಾಯಿಸುವ ವಿಧಾನಪರಿಷತ್ ಸದಸ್ಯರು ಸ್ಥಳೀಯ ನಿವಾಸಿ ಆಗಿರಬೇಕು.ಮತದಾರರ ಪಟ್ಟಿಯಲ್ಲಿ ಅವರ ಹೆಸರಿರಬೇಕು.ಕನಿಷ್ಟ ೬ ತಿಂಗಳಿAದ ಇಲ್ಲಿ ವಾಸವಿರಬೇಕು ಎಂದಿದೆ. ಆದರೆ ವಿಧಾನಪರಿಷತ್ ಸದಸ್ಯರಾದ ಕೋಲಾರದ ನಿವಾಸಿಯಾದ ಅನಿಲ್‌ಕುಮಾರ್ ಅವರನ್ನು ನಗರದ ೨೮ನೇ ವಾರ್ಡಿನ ಕೊರಚರಪೇಟೆಯಲ್ಲಿ ಬರುವ ೧೫೨ನೇ ಬೂತ್ ಮತದಾರರ ಪಟ್ಟಿಗೆ ಬಿಎಲ್‌ಒ ಮರಿಯಪ್ಪ ಮೇಲೆ ಒತ್ತಡ ಹಾಕಿ ಸೇರಿಸಿದ್ದಾರೆ. ಸಿಎಂಸಿ ಲೇಔಟ್‌ನಲ್ಲಿ ಬರುವ ನಗರಸಭಾ ಸದಸ್ಯರ ಮನೆಯಲ್ಲಿ ವಾರ್ಡ್ ನಂ ೧೫/೧೯ರಲ್ಲಿ ಬರುವ ಬೂತ್ ನಂಬರ್ ೧೬೧ ಬಿಎಲ್‌ಒ ರಮೇಶ್‌ಕುಮಾರ್ ಮೇಲೆ ಒತ್ತಡ ತಂದು ಬೆಂಗಳೂರಿನ ಎಂಎಲ್‌ಸಿ ಎಂ.ಆರ್.ಸೀತಾರಾಮ್ ಹೆಸರು ಸೇರಿಸಲಾಗಿದೆ. ಮತ್ತೊಬ್ಬ ೧೮೩ನೇ ಬೂತ್ ಬಿಎಲ್‌ಒ ರೂಪಶ್ರೀ ಅವರ ಮೇಲೆ ಸತತವಾಗಿ ಒತ್ತಡ ತಂದು ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಮುಂದಾಗಿದ್ದಾರೆ. ಆದರೆ ಆಶಿಕ್ಷಕಿ ಹುದ್ದೆ ಬೇಕಾದರೆ ಬಿಡುತ್ತೇನೆ ಪಟ್ಟಿಗೆ ಸೇರಿಸಲಾಗದು ಎಂದಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.  

ಕಾಂಗ್ರೆಸ್ ಪಕ್ಷದಿಂದ ೧೬ ಮಂದಿ ಆರಿಸಿಬಂದಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಕ್ಕೇರುವ ಬದಲಿಗೆ, ಅವರ ವಿರೋಧ ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.ಮೈತ್ರಿ ಪಕ್ಷದ ಅಭ್ಯರ್ಥಿಪರ ನಿಂತಿರುವ ಉಚ್ಚಾಟಿತ ಕಾಂಗ್ರೆಸ್ ಸದಸ್ಯರು ಎಂಎಲ್‌ಎ, ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ನಿಂತಿದ್ದರು.ಕಳೆದ ಬಾರಿ ಅಡ್ಡಮತದಾನ ಮಾಡಿದ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಿದ್ದರು. ಇಂತಹವರು ನಮ್ಮ ಜತೆ ಇದ್ದಾರೆ.ಇದನ್ನು ಸಹಿಸದ ಶಾಸಕ ಮತ್ತು ಮಂತ್ರಿಗಳು ಸ್ಥಳೀಯರೇ ಅಲ್ಲದ ಚಿಕ್ಕಬಳ್ಳಾಪುರದಲ್ಲಿ ಒಂದೂ ದಿನವವೂ ನೆಲೆಸದ ವಿಧಾನಪರಿಷತ್ ಸದಸ್ಯರನ್ನು,ಅಕ್ರಮವಾಗಿ ನಗರದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ಖೊಟ್ಟಿ ದಾಖಲಾತಿ ಸೃಷ್ಟಿಸಿ ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಇದು ತಿರುಕನ ಕನಸಾಗಿದೆ.ಗೆಲುವು ಸಂಸದ ಸುಧಾಕರ್ ಸೂಚಿಸುವ ಅಭ್ಯರ್ಥಿಯದ್ದೇ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯರನ್ನು ನಗರ ನಿವಾಸಿಗಳು ಎಂದು ನಮೂದಿಸಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಸೇರಿಸಿದ್ದು, ಯು.ಬಿ.ವೆಂಕಟೇಶ್, ಉಮಾಶ್ರೀ,ಶಿಕ್ಷಕರ ಕ್ಷೇತ್ರದ ಶ್ರೀನಿವಾಸ್ ಮೊದಲಾದ ವಿಧಾನಪರಿಷತ್ ಸದಸ್ಯರನ್ನು ಪಟ್ಟಿಯಲ್ಲಿ ಸೇರಿಸಲು ಹುನ್ನಾರ ನಡೆಯುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗುತ್ತಿರುವ ಬಿಎಲ್‌ಒ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ನುಡಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಕಾಂಗ್ರೆಸ್ ನೈತಿಕತೆ ಎತ್ತ ಕಡೆ ಸಾಗಿದೆ. ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಅಧಿಕಾರಕ್ಕಾಗಿ ಅನಧಿಕೃತವಾಗಿ ಹೊರಗಿನವರನ್ನು ಸೇರಿಸಿ ಮತದಾರರನ್ನಾಗಿ ಮಾಡಲು ಮುಂದಾಗುತ್ತಿರುವುದು ಖಂಡನೀಯ. ಇಂತಹ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಇದು ನಾಚಿಕೆಗೇಡು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಆನಂದ್‌ರೆಡ್ಡಿ ಬಾಬು ಮಾತನಾಡಿ, ಮತದಾರನಾಗಿ ಮತದಾರರ ಪಟ್ಟಿಗಾಗಿ ಈಗಾಗಲೇ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಅವರು ನೀಡುವ ಮತದಾರರ ಪಟ್ಟಿಯಲ್ಲಿ ಸತ್ಯಾಸತ್ಯತೆ ಬಹಿರಂಗ ಗೊಳ್ಳಲಿದೆ. ಇದರಲ್ಲಿ ಏನಾದರೂ ವಾಮಮಾರ್ಗದಲ್ಲಿ ಹೆಸರುಗಳನ್ನು ಸೇರಿಸಿದರೆ, ಕಾನೂನು ಹೋರಾಟ ನಡೆಸಲು ಮುಂದಾಗುವುದಾಗಿ ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ.ಮಂಜುನಾಥ್, ಮುನಿಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮರಳ ಕುಂಟೆ ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಆನಂದ್‌ಅನು, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಕಿಸಾನ್ ಕೃಷ್ಣಪ್ಪ, ಬಿಜೆಪಿ ಮುಖಂಡ ಸೀನಪ್ಪ, ವಾಪಸಂದ್ರ ಡೇರಿ ಅಧ್ಯಕ್ಷ ಜೆಸಿಬಿ ಮಂಜು ಇದ್ದರು.

ಚುನಾವಣಾಧಿಕಾರಿಗೆ ಮನವಿ
ಸೆಪ್ಟೆಂಬರ್ ೧೨ ರಂದು ನಡೆಯಲಿರುವ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆಯ ಮತದಾರರ ಪಟ್ಟಿಯನ್ನು ನೀಡುವಂತೆ ನಗರಸಭೆ ಮಾಜಿ ಅಧ್ಯಕ್ಷರಾದ ಆನಂದರೆಡ್ಡಿ ಬಾಬು ಅವರು ನಗರಸಭೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆದಿರುವ ಮತದಾರರ ಪಟ್ಟಿಯನ್ನು ಅತಿ ತುರ್ತಾಗಿ ನೀಡಬೇಕೆಂದು ಮತ್ತು ೩೧ ಜನ ನಗರಸಭೆ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರನ್ನು ಬಿಟ್ಟು ಉಳಿದ ವಿಧಾನಪರಿಷತ್ತು ಸದಸ್ಯರನ್ನು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಫಾರಂ ನಂಬರ್ -೮ ರ ಪ್ರಕಾರ ಎಲ್ಲಿಂದ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಯಾವ ಮತದಾರರ ಪಟ್ಟಿಗೆ ಸೇರ್ಪಡೆ ಯಾಗಿದೆ ಎಂಬುದರ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೃಢೀಕರಣ ಪತ್ರ ನೀಡಬೇಕೆಂದು ಚುನಾವಣಾಧಿಕಾರಿಗೆ ಪತ್ರದಲ್ಲಿ ಕೋರಲಾಗಿದೆ.