Saturday, 14th December 2024

Naxal Arrested: ಹರಿಯಾಣದ ನಕ್ಸಲ್ ಬೆಂಗಳೂರಲ್ಲಿ ಸೆರೆ; ಗೆಳತಿಯ ಭೇಟಿಗೆ ಬಂದು ಸಿಕ್ಕಿಬಿದ್ದ!

Naxal Arrested

ಬೆಂಗಳೂರು: ಹರಿಯಾಣ ಮೂಲದ ನಕ್ಸಲ್ ನಾಯಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಗೆಳತಿಯನ್ನು ಭೇಟಿಯಾಗಲು ಬಂದಿದ್ದ ನಕ್ಸಲ್, ಸಿಸಿಬಿಯ ಎಟಿಸಿ ಬಲೆಗೆ (Naxal Arrested) ಬಿದ್ದಿದ್ದಾನೆ.

ಅನಿರುದ್ಧ ರಾಜನ್ ಬಂಧಿತ ನಕ್ಸಲ್. ಈತ ನಿಷೇಧಿತ ಸಿಪಿಐ(ಎಂ)‌ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ನಿಷೇಧಿತ ಬರಹಗಳನ್ನು ಪೋಸ್ಟ್ ಮಾಡುತ್ತಿದ್ದ. ಈತನಿಗಾಗಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.

ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸುತ್ತಿದ್ದ ಈತ, ತನ್ನ ಗೆಳತಿಯನ್ನು ನೋಡಲು ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ. ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ. ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ಟೀಂ ಅನಿರುದ್ಧ ಬಂಧಿಸಿ UAPA ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದೆ.

ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ಹೋಗಲು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಿದ್ದ. ಈ ವೇಳೆ ನಕ್ಸಲ್‌ನ ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಈತನಿಂದ ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾತನಾಡಿ, ಹರಿಯಾಣ ಮೂಲದ ಅನಿರುದ್ಧ ರಾಜನ್ ಖಾಸಗಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ. ಈತ ನಿಷೇಧಿತ ಸಂಘಟನೆಯ ಸಂಪರ್ಕ ಹೊಂದಿದ್ದು, ಸದ್ಯ ಆತನನ್ನು ಬಂಧಿಸಿ, 15 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ. ಆತನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಟ್ರೇಡಿಂಗ್ ವಂಚನೆ; ಪ್ರಾಧ್ಯಾಪಕ ನಿಗೆ 10 ಲಕ್ಷ ಪಂಗನಾಮ

ತುಮಕೂರು: ಆನ್ ಲೈನ್ ವಂಚಕರ ಜಾಲಕ್ಕೆ ಪ್ರಾಧ್ಯಾಪಕ 10.53 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ. ನಗರದ ಎಸ್.ಎಸ್.ಪುರಂನ ನಿವಾಸಿ, ಪ್ರಾಧ್ಯಾಪಕ ಟಿ.ಆ‌ರ್.ಹೇಮಂತ್‌ಕುಮಾರ್ 10.53 ಲಕ್ಷ ಕಳೆದುಕೊಂಡಿದ್ದಾರೆ.

ಡಿಂಗ್ ಮೇಲೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಮುಖಾಂತರ ಡಿ-ಮಾಟ್ ಟ್ರೇಡಿಂಗ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ವಾಟ್ಸ್ ಆ್ಯಪ್‌ನಲ್ಲಿ ಹಣ ಹೂಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಸೈಬರ್ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್‌ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಆ.5ರಿಂದ 27ರ ವರೆಗೆ ಹಂತ ಹಂತವಾಗಿ 10.53 ಲಕ್ಷ  ವರ್ಗಾಯಿಸಿದ್ದಾರೆ.

ಹೇಮಂತ್ ಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಸೈಬ‌ರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.