Saturday, 26th October 2024

ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಪ್ರಾರಂಭ: ಎನ್.ಕೆ.ಶಫಿ ಸಾಆದಿ

ರಾಜ್ಯದಲ್ಲಿ ಹತ್ತು ಮಹಿಳಾ ಪದವಿ ಪೂರ್ವ ಕಾಲೇಜು ನಿರ್ಮಾಣ

ಕಲಬುರಗಿ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ ರಾಜ್ಯದ ವಿವಿಧಡೆ ಹತ್ತು ಮಹಿಳಾ ಪದವಿ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್.ಕೆ.ಶಫಿ ಸಾಆದಿ ಅವರು ತಿಳಿಸಿದರು.

ಭಾನುವಾರ ಇಲ್ಲಿನ ಕೆ.ಬಿ.ಎನ್. ಕಾಲೇಜು ಎದುರುಗಡೆ‌ಯ ಅಂಜುಮ್-ಎ-ತರಖ್ಖಿ ಉರ್ದು ಹಾಲ್‌ನಲ್ಲಿ ಪತ್ರಿಕಾಗೋಷ್ಠಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಯುವಕ/ಯುವತಿಯರು ಐಎಎಸ್, ಐಪಿಎಸ್ ಸೇರಿದಂತೆ ಸರಕಾರಿ ಹುದ್ದೆಗಳ ಪರೀಕ್ಷೆ ಪಾಸಾಗುವ ನಿಟ್ಟಿನಲ್ಲಿ ವಕ್ಫ್ ಮಂಡಳಿ ವತಿಯಿಂದ ಆಧುನಿಕ ತಂತ್ರಜ್ಞಾನ ಉಳ್ಳ ತರಬೇತಿ ಕೇಂದ್ರವನ್ನು ಬೆಂಗಳೂರಿನಲ್ಲಿ 30 ಸಾವಿರ ಚ.ಅ ಯಲ್ಲಿ ನಿರ್ಮಿಸಲಾಗುವುದು. ಈ ತರಬೇತಿ ಕೇಂದ್ರಕ್ಕೆ ಉದ್ಯಮಿ ಜಿಯಾ ವುಲ್ಲಾ ಶರೀಫ್ 15 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಅಲ್ಲದೇ ತುಮಕೂರಿನ ಹಜರತ್ ಮದಾರ ಶಾ ಮಕಾನ್ ಸಂಸ್ಥೆಯಲ್ಲಿ ಮಹಿಳಾ ಕಾಲೇಜು ಹಾಗೂ ವಸತಿ ನಿಲಯ ನಿರ್ಮಾಣಕ್ಕಾಗಿ ಸರಕಾರದಿಂದ 2.5 ಕೋಟಿ ರು. ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.

ವಕ್ಫ್ ಮಂಡಳಿ ವತಿಯಿಂದ 6 ಅಂಶಗಳ ಕಾರ್ಯ ಕೈಗೊಂಡಿದ್ದು, ಹೊಸದಾಗಿ ನೋಂದಾಯಿಸಿದ ಆಸ್ತಿಗಳ 2ನೇ ಬಾರಿ ಸರ್ವೆಕಾರ್ಯ ಮಾಡಲಾಗುವುದು. ಆಸ್ತಿಗಳ ಸಂರಕ್ಷಣೆಗಾಗಿ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಹಿರಿಯ ವಕೀಲರೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಪ್ರಕರಣ ಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ಒಟ್ಟು ವಕ್ಫ್ ಮಂಡಳಿಗೆ ಅಂದಾಜು 2ಲಕ್ಷ ಕೋಟಿ ಅಸ್ತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಮಂಡಳಿಯ ಅಧಿನದಲ್ಲಿಲ್ಲ.

ಬೇರೆ ಬೇರೆ ಸಂಸ್ಥೆಗಳ ಅಧಿನದಲ್ಲಿ ಇವೆ. ಅವುಗಳನ್ನು ಶೀಘ್ರದಲ್ಲಿ ಲೆಕ್ಕ ಪರಿಶೋಧನೆ ಮಾಡಲಾಗು ವುದು. ವಕ್ಫ್ ಮಂಡಳಿ ಅಸ್ತಿಗಳಲ್ಲಿ ಕೇವಲ ಮದರಸ ಹಾಗೂ ಮಜೀದ್ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ನಿರ್ಮಾಣ ಮೂಲಕ ಶೈಕ್ಷಣಿಕ ಅಭಿವೃದ್ಧಿಪಡಿಸಲಾಗುವು. ವಕ್ಫ್ ಸಂಸ್ಥೆಗಳ ಮೂಲ ಅಸ್ತಿಗಳ ದಾಖಲೆಗಳ ಸಂರಕ್ಷಣೆ ಮತ್ತು ಗಣಕೀಕರಣ (ಡಿಜಿಟಲೈಸೇಷನ್), ವಕ್ಫ್ ಅಸ್ತಿಗಳ ಬಾಡಿಗೆ ನಿಯಮಗಳು 2014 (ತಿದ್ದುಪಡಿ 2019) ಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.

ಮಂಡಳಿ ವತಿಯಿಂದ ನೋಂದಾಯಿತ ಪೇಶ್ ಇಮಾಮ್ 4, ಸಾವಿರ ಹಾಗೂ ಮೌಜನ್ಸ್ ಗಳಿಗೆ 3,000 ರೂ.ಗಳ ಗೌರವ ಧನ ನೀಡಲಾಗುತ್ತಿದೆ. ಒಟ್ಟು ರಾಜ್ಯದ 7 ಸಾವಿರ ಮಸೀದಿಗಳ 13809 ಪೇಶ್ ಇಮಾಮ್ ಮತ್ತು ಮೌಜನ್ ಫಲಾನುಭವಿಗಳಿಗೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ. ಗೌರವಧನವು ನೇರವಾಗಿ ಮೌಜನ್ಸ್ ಮತ್ತು ಪೇಶ್ ಇಮಾಮ್ ಗಳಿಗೆ ಪ್ರತಿ ತಿಂಗಳಿಗೊಮ್ಮೆ ಆನ್‌ಲೈನ್ ಮೂಲಕ ಪಾವತಿಸಲಾಗುತ್ತಿದೆ ಎಂದರು.

ಬೆಂಗಳೂರಿನ ಕೇಂದ್ರ ಕಛೇರಿ ದಾರುಲ್ ಔಕಾಫ್  ಜೀರ್ನೋದ್ಧಾರಕ್ಕಾಗಿ ಸರಕಾರ 2ಕೋಟಿ ಅನುದಾನ ಮಂಜೂರು ಮಾಡಿದೆ. ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿನ್ಗ್ ಅಪ್ಲಿಕೇಷನ್ಸ್ ಸೆಂಟರ್ ರವರ ಸಹ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿರುವ ಎಲ್ಲಾ ವಕ್ಫ್ ಆಸ್ತಿಗಳನ್ನು ದ್ರೋಣ ತಂತ್ರ ಜ್ಞಾನದ ಸಹಾಯದಿಂದ ಸರ್ವೆಗೆ ಒಳಪಡಿಸಲಾಗುವುದು. ಚಿಂತಾಮಣಿಯಲ್ಲಿರುವ ದರ್ಗಾ ಹಜರತ್ ಫಕೀ ಶಾ ವ ಮುರಗಮಲ್ಲಾ (ಅಮ್ಮಾ ಜಾನ್ ಬಾವಾ ಜಾನ್) ಸಂಸ್ಥೆಯನ್ನು ಪುನರ್ವಸತಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ 2 ಕೋಟಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಪದೋನ್ನತಿ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮೊದಲ ಬಾರಿಗೆ ವಕ್ಫ್ ಮಂಡಳಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದ್ದು, ಇಬ್ಬರು ಅಧಿಕಾರಿಗಳಿಗೆ ವಿಭಾಗೀಯ ವಕ್ಫ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಬೆಳಗಾವಿ ಮತ್ತು ಮೈಸೂರು ವಿಭಾಗೀಯ ಕಚೇರಿ ಆರಂಭಿಸ ಲಾಗಿದೆ.15 ವಕ್ಫ್ ನಿರೀಕ್ಷಕರಿಗೆ ವಕ್ಫ್ ಅಧಿಕಾರಿಯಾಗಿ ಪದೋನ್ನತಿ ನೀಡಲಾಗಿದೆ. ಅಲ್ಲದೇ, 7 ದ್ವಿತೀಯ ದರ್ಜೆ ಸಹಾಯಕರಿಗೆ ವಕ್ಫ್ ನಿರೀಕ್ಷಕರಾಗಿ ಮುಂಬಡ್ತಿ ನೀಡಲಾಗಿದೆ ಮೌಲಾನಾ ಎನ್.ಕೆ.ಶಫಿ ಸಾಆದಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕ್ಸ್ ಬೋರ್ಡ್ ಸದಸ್ಯ ಜಿ ಯಾಕೋ, ಕೆಎಂಡಿಸಿ ಅಧ್ಯಕ್ಷ ಸದ್ದಾಮ್ ಹುಸೇನ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಖಾಜಾ ಹುಸೇನ್ ಅತನೂರ್, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಹಜರತ್ ಅಲಿ ನದಾಫ್, ಸೈಯದ್ ಖಾದ್ರಿ ಸಾಬ್ ಸೇರಿದಂತೆ ಅನೇಕರು ಇದ್ದರು.