Thursday, 21st November 2024

ಶಿರಾಡಿ ರಸ್ತೆ ಬಂದ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಿ.ಸಿ.ಪಾಟೀಲ್

ಹಾಸನ: ಬೆಂಗಳೂರು- ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಶಿರಾಡಿ ರಸ್ತೆ ಬಂದ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಸಕಲೇಶಪುರ ಬಳಿಯ ದೋಣಿಗಾಲ್ ಸಮೀಪದ ಹೆದ್ದಾರಿ ಕುಸಿತದ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-75 ನೆಲ ಮಂಗಲದಿಂದ ಹಾಸನದವರೆಗೆ ಅಚ್ಚುಕಟ್ಟಾಗಿ ಮಾಡಲಾಗಿದೆ.

ಆದರೆ ಹಾಸನದಿಂದ ಸಕಲೇಶಪುರ ಮಾರ್ಗದ ರಸ್ತೆ ಕಾಮಗಾರಿ ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ.

ಮಂಗಳೂರು ಸಂಪರ್ಕದ ಪ್ರಮುಖ ರಸ್ತೆಯಾದ ಕಾರಣ ಬಂದ್ ಮಾಡದಂತೆ ರಸ್ತೆ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಕೋವಿಡ್ ಹಾಗೂ ಮಳೆ ಕಾರಣ ಕಾಮಗಾರಿ ವಿಳಂಬವಾಗಿದೆ. ಕೆಲವು ಕಡೆ ಕಳಪೆ ಕಾಮಗಾರಿ ನಡೆದಿದ್ದು, ಸಮರ್ಪಕವಾಗಿ ದುರಸ್ತಿ ನಡೆಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಈ ಹೆದ್ದಾರಿ ಕಾಮಗಾರಿ ವಿಚಾರವಾಗಿ ವಿಧಾನಸಭೆಯಲ್ಲಿ ಸಹ ಪ್ರಸ್ತಾಪವಾದ ಕಾರಣ ಖುದ್ದು ವೀಕ್ಷಣೆಗೆ ಬಂದಿದ್ದೇನೆ. ಕಳಪೆ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ. 2024ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸುವ ಬಗ್ಗೆ ಗುತ್ತಿಗೆದಾರರು ಭರವಸೆ ನೀಡಿದ್ದಾರೆ ಎಂದರು.

ಹೆದ್ದಾರಿ ಕಾಮಗಾರಿ ನೆಪದಲ್ಲಿ ಮರಳು ಅಕ್ರಮ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಚಿವ ಹಾಲಪ್ಪ ಆಚಾರ್ ಅವರ ಬಳಿ ಮಾತನಾಡಿದ್ದು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.