Friday, 20th September 2024

ಈ ಬಾರಿ ಏಕವ್ಯಕ್ತಿ ಚಕ್ರಾಧಿಪತ್ಯ ನಡೆಯಲ್ಲ

– ಪ್ರಧಾನಿ ಮೋದಿ ಕುರಿತು ಸಚಿವ ಶಿವರಾಜ ತಂಗಡಗಿ ಟೀಕೆ
– ಹುಟ್ಟಿದ ದಿನದ ಸಂಭ್ರಮದಲ್ಲಿ ಸಚಿವ ತಂಗಡಗಿ

ಕನಕಗಿರಿ: ಈ ಹಿಂದಿ ಎರಡು ಅವಧಿಯಂತೆ ಪ್ರಧಾನಿ ಮೋದಿ ಅವರ ಏಕವ್ಯಕ್ತಿ ಚಕ್ರಾಧಿಪತ್ಯ ಈ ಬಾರಿ ನಡೆಯುವುದಿಲ್ಲ. ಜೊತೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದಂತೆ ಮೋದಿ ಅವರ ಈ ಸರಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಸಚಿವ ಶಿವರಾಜ ತಂಡಗಿ ಭವಿಷ್ಯ ನುಡಿದಿದ್ದಾರೆ.

ಪಟ್ಟಣದ ಶ್ರೀಕನಕಾಚಲಪತಿ ದೇವಸ್ಥಾನದಲ್ಲಿ ತಮ್ಮ ಹುಟ್ಟಿದ ದಿನದ ಹಿನ್ನೆಲೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು.

ಚುನಾವಣೆಗೂ ಮೊದಲು ಬಿಜೆಪಿಗರು ಹೇಳಿದ್ದ 400 ಪಾರ್ ಸುಳ್ಳಾಗುತ್ತೆ ಎಂದು ನಾನು ಆಗಲೇ ಹೇಳಿದ್ದೆ. ಆದರೆ, ನಮ್ಮ ನಿರೀಕ್ಷೆಯಂತೆ ಇನ್ನೂ ಸ್ವಲ್ಪ ಕಡೆ ಕಾಂಗ್ರೆಸ್ ಗೆಲ್ಲಬೇಕಿತ್ತು. ಅದು ಆಗಿಲ್ಲ. ಆದರೆ, ಈ ಬಾರಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರುವ ಕೆಲ ಪಕ್ಷಗಳ ಎನ್ ಡಿಎ ಬೆಂಬಲಿಸಿವೆ. ಈ ಹಿನ್ನೆಲೆ ಈ ಬಾರಿ ಮೋದಿ- ಅಮಿತ್ ಶಾ ಹಿಂದಿನ ಅವಧಿಯಂತೆ ಸರ್ವಾಧಿಕಾರಿಯಂತೆ ಆಡಳಿತ ಮಾಡಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇವೆ. ತಿದ್ದುಪಡಿ ಮಾಡುತ್ತೇವೆ ಎಂದು ಹೇಳಲು ಆಗುವುದಿಲ್ಲ. ಈ ದೇಶದ ಜನರು ಈ ಬಾರಿ ಪ್ರಭಲ‌ ವಿರೋಧ ಪಕ್ಷ ಕೊಟ್ಟಿದ್ದಾರೆ. ಅದರಂತೆ ಪ್ರಭಲ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದ್ದಾರೆ ಎಂದು ಎಚ್ಚರಿಕೆ ‌ನೀಡಿದರು.

ಈ ಬಾರಿ ರಾಮನ ನಾಡು ಅಯೋಧ್ಯೆ ಹನುಮನ ನಾಡು ಕೊಪ್ಪಳದಲ್ಲಿ ಬಿಜೆಪಿಗೆ ಸೋಲಾಗಿದೆ. ಈ ಮೂಲಕ ರಾಮ ಮತ್ತು ಹನುಮ ಇಬ್ಬರೂ ನಮ್ಮ ಹೆಸರಿನಲ್ಲಿ ರಾಜಕಾರಣ ಮಾಡಬೇಡಿ ಎಂದು ಬಿಜೆಪಿಗೆ ನೇರವಾಗಿ ಶಾಪ ಕೊಟ್ಟು, ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಗರು ಮತ್ತೊಮ್ಮೆ ರಾಮ-ಹನುಮನ ಹೆಸರಿನಲ್ಲಿ ರಾಜಕೀಯ ಮಾಡಿದರೆ ಬಿಜೆಪಿ ನೂರರ ಗಡಿ ಕೂಡ ದಾಟುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಗೆ ಕಳೆದ 3 ಚುನಾವಣೆ ಸೇರಿ ಬಿಜೆಪಿಯ ಈ ಬಾರಿ ಬಂದಷ್ಟು ಸ್ಥಾನ ಆಗುವುದಿಲ್ಲ ಎಂಬ ಪ್ರಧಾನಿ ಮೋದಿ ಮಾತಿಗೆ ಪ್ರತಿಕ್ರಿಯಿಸಿ, ಬಿಜೆಪಿಗರು ಈ ಹಿಂದೆ ಹೇಗೆ ಟೀಕೆ ಮಾಡುತ್ತಿದ್ದರು? ಎಂಬುದು ಅವರು ಅರ್ಥ ಮಾಡಿಕೊಳ್ಳಲಿ. ವಿರೋಧದ ನಾಯಕನ ಸ್ಥಾನ ಮಾನ ದೊರೆಯದಷ್ಟು ಸಂಸದರು ಇಲ್ಲ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಎಂದು ಮಾತನಾಡುತ್ತಿದ್ದಾರು. ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು- ಅಪ್ಪು ಎಂದು ಟೀಕೆ ಮಾಡುತ್ತಿದ್ದರು. ಇಂಥ ಮಾತಿಗ ದೇಶದ ಜನ‌ ಉತ್ತರ ನೀಡಿದ್ದಾರೆ ಎಂದರು.

ಎಸ್ಟಿ ಖಾತೆ: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಮೊದಲು ನನಗೆ ನೀಡಲಾಗಿತ್ತು. ಕೆಲ ಕಾರಣಕ್ಕೆ ಅದು ನಾಗೇಂದ್ರ ‌ಅವರಿಗೆ ನೀಡಲಾಯಿತು. ‌ಕಾರಣಾಂತರದಿಂದ ಅದು ಖಾಲಿ ಇದೆ. ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

*
ಕಲ್ಯಾಣ ಕರ್ನಾಟಕ ಭಾಗದ 5ಕ್ಕೆ 5 ಕಡೆ ಕಾಂಗ್ರೆಸ್‌ ಗೆದ್ದಿದ್ದು, ಗ್ಯಾರಂಟಿ ಯೋಜನೆಯಿಂದ.‌ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 16 ಕಡೆ ಗೆಲ್ಲುವ ಗುರಿ ಹೊಂದಿತ್ತು. ಅದು ಆಗಿಲ್ಲ. ಆದರೆ, ಗ್ಯಾರಂಟಿ ಯೋಜನೆಯಿಂದ ಬಡವರು ಬದುಕುತ್ತಿದ್ದಾರೆ. ಇದರಿಂದ ಯೋಜನೆ ನಿಲ್ಲಿಸುವುದಿಲ್ಲ ಎಂದು ಸಿಎಂ, ಡಿಸಿಎಂ ಸ್ಪಷ್ಠವಾಗಿ ಹೇಳಿದ್ದಾರೆ. ಕಾಂಗ್ರೆಸ್ ನ ಕೆಲ ಮುಖಂಡರು, ಶಾಸಕ- ಸಚಿವರು ಗ್ಯಾರಂಟಿ ನಿಲ್ಲಿಸುವ ಮಾತನಾಡಿದ್ದರೆ ಅದು ‌ತಪ್ಪು ಮತ್ತು ಅವರ ವೈಯಕ್ತಿಕ ಅಭಿಪ್ರಾಯ.

– ಶಿವರಾಜ ತಂಗಡಗಿ, ಸಚಿವ